ದರ್ಶನ್‌ಗೆ ಮತ್ತೆ ಜಾಮೀನು ಅವಕಾಶ ಯಾವಾಗ? ಸುಪ್ರೀಂ ಕೋರ್ಟ್ ಏನು ಹೇಳಿದೆ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ಕಳೆದ ಹಲವು ತಿಂಗಳುಗಳಿಂದ ಜೈಲಿನಲ್ಲಿದ್ದಾರೆ. ವಿಚಾರಣೆಯಲ್ಲಿ ವಿಳಂಬವಾಗುತ್ತಿರುವುದನ್ನು ಆಧರಿಸಿ ಜಾಮೀನು ಕೋರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ. ಬಿ. ಪಾರ್ದಿವಾಲಾ ಮತ್ತು ವಿಜಯ್ ಬಿಷ್ಣೋಯ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆಯ ನಂತರ ಪೀಠವು ದರ್ಶನ್‌ಗೆ ಜಾಮೀನು ನಿರಾಕರಿಸಿದ್ದು, ಮುಂದಿನ ಒಂದು ವರ್ಷದಲ್ಲಿ ಜಾಮೀನು ಕೋರಿ ಹೊಸ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಒಂದು ವರ್ಷದಲ್ಲಿ ಪ್ರಕರಣದ ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಾಣದಿದ್ದರೆ ಮಾತ್ರ ಜಾಮೀನು ಅರ್ಜಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಇದೇ ವೇಳೆ, “ಜೈಲು ಕೈಪಿಡಿಯ ಪ್ರಕಾರ ವಿಚಾರಣಾಧೀನ ಕೈದಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ದರ್ಶನ್‌ಗೆ ನೀಡಬೇಕು” ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಜೊತೆಗೆ, ಒಂದು ವರ್ಷದೊಳಗೆ ಕನಿಷ್ಠ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಪ್ರಾಸಿಕ್ಯೂಷನ್‌ಗೆ ಆದೇಶಿಸಿದೆ.

ದರ್ಶನ್ ಪರ ವಕೀಲರು ವಿಚಾರಣೆ ವಿಳಂಬ, ಸೆಲ್ ಪರಿಸ್ಥಿತಿ ಹಾಗೂ ಸೌಲಭ್ಯಗಳ ಕೊರತೆ ಬಗ್ಗೆ ಕೋರ್ಟ್ ಗಮನಕ್ಕೆ ತಂದಿದ್ದರು. ರಾಜ್ಯ ಸರ್ಕಾರದ ಪರ ವಕೀಲರು ವಿಚಾರಣೆಯ ಪ್ರಗತಿ ಹಾಗೂ ಸಾಕ್ಷ್ಯ ವಿಚಾರಣೆಯ ವೇಗವನ್ನು ಸಮರ್ಥಿಸಿಕೊಂಡಿದ್ದರು. ವಾದ–ಪ್ರತಿವಾದಗಳನ್ನು ಆಲಿಸಿದ ಬಳಿಕ ಪೀಠವು ಜಾಮೀನು ಮನವಿಯನ್ನು ತಿರಸ್ಕರಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-15 17:14:15
No Reviews