ಟಿವಿಗೆ ಸಂಕಷ್ಟ ತಂದ ಸ್ಮಾರ್ಟ್‌ಫೋನ್ ಕ್ರಾಂತಿ! 50ಕ್ಕೂ ಹೆಚ್ಚು ಚಾನೆಲ್ಗಳು ಬಂದ್

ವೀಕ್ಷಕರ ಸಂಖ್ಯೆ ನಿರಂತರವಾಗಿ ಕುಸಿಯುತ್ತಿರುವುದು, ಜಾಹೀರಾತು ಆದಾಯ ಡಿಜಿಟಲ್ ವೇದಿಕೆಗಳಿಗೆ ಹರಿದುಹೋಗುತ್ತಿರುವುದು ಮತ್ತು ಕಾರ್ಯಾಚರಣಾ ವೆಚ್ಚಗಳ ಭಾರ—ಈ ಎಲ್ಲ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ದೇಶದಾದ್ಯಂತ ಸುಮಾರು 50 ಘಟಾನುಘಟಿ ಟಿವಿ ಚಾನೆಲ್ಗಳು ತಮ್ಮ ಪರವಾನಗಿಗಳನ್ನು ವಾಪಸ್ ನೀಡಿ, ಪ್ರಸಾರವನ್ನು ಸ್ಥಗಿತಗೊಳಿಸಿವೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿರುವಂತೆ, ಜಿಯೋಸ್ಟಾರ್, ಜೀ ಎಂಟರ್ಟೈನ್ಮೆಂಟ್, ಈನಾಡು ಟೆಲಿವಿಷನ್, ಟಿವಿ ಟುಡೇ ನೆಟ್ವರ್ಕ್ ಹಾಗೂ ಎಬಿಪಿ ನೆಟ್ವರ್ಕ್‌ಗಳಿಗೆ ಸೇರಿದ ಹಲವು ಚಾನೆಲ್ಗಳು ಈ ಪಟ್ಟಿಯಲ್ಲಿ ಸೇರಿವೆ.

ಟಿವಿಗೆ ಸಂಕಷ್ಟ ತಂದ ಸ್ಮಾರ್ಟ್‌ಫೋನ್ ಕ್ರಾಂತಿ

ಒಂದು ಕಾಲದಲ್ಲಿ ಮನೆಯ ಎಲ್ಲರ ಗಮನ ಸೆಳೆದಿದ್ದ ಟಿವಿ, ಈಗ ಬಹುತೇಕ ಮನೆಗಳಲ್ಲಿ ಮೌನವಾಗಿದೆ. ಟಿವಿ ರಿಮೋಟ್‌ಗಾಗಿ ಜಗಳವಾಡುತ್ತಿದ್ದ ದಿನಗಳು ಹಿನ್ನಡೆಯಾಗಿದ್ದು, ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಕೈಯಲ್ಲಿರುವುದರಿಂದ ತಮಗೆ ಬೇಕಾದ ವಿಷಯವನ್ನು ಯಾವಾಗ ಬೇಕಾದರೂ ನೋಡಿಕೊಳ್ಳುವ ಅಭ್ಯಾಸ ಜನರಲ್ಲಿ ಬೆಳೆದಿದೆ. ಇದರ ಪರಿಣಾಮವಾಗಿ ಟಿವಿ ಚಾನೆಲ್ಗಳ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಹೆಚ್ಚುತ್ತಿರುವ ವೆಚ್ಚ, ಕಡಿಮೆಯಾಗುತ್ತಿರುವ ಆದಾಯ

ವೀಕ್ಷಕರು ಕಡಿಮೆಯಾದರೂ, ನೆಟ್ವರ್ಕ್ಗಳಿಗೆ ಟಿವಿ ಚಾನೆಲ್ಗಳು ಪಾವತಿಸಬೇಕಾದ ಬಾಡಿಗೆ ಮೊತ್ತ ಮಾತ್ರ ಕಡಿಮೆಯಾಗಿಲ್ಲ. ಇದರ ಜೊತೆಗೆ ಜಾಹೀರಾತು ಆದಾಯವೂ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಕಡೆಗೆ ಸರಿದಿದೆ. ಟಿವಿ ಮಾಧ್ಯಮ ಸಂಪೂರ್ಣವಾಗಿ ಜಾಹೀರಾತುಗಳ ಮೇಲೆ ಅವಲಂಬಿತವಾಗಿದ್ದು, ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಕಡಿಮೆ ವೆಚ್ಚಕ್ಕೆ ಗುರಿ ಗ್ರಾಹಕರಿಗೆ ನೇರವಾಗಿ ಜಾಹೀರಾತು ತಲುಪಿಸುವ ಸಾಧ್ಯತೆ ಇರುವುದರಿಂದ ಜಾಹೀರಾತುದಾರರು ಡಿಜಿಟಲ್‌ಗೆ ಹೆಚ್ಚು ಒಲವು ತೋರುತ್ತಿದ್ದಾರೆ.

ಪರವಾನಗಿ ವಾಪಸ್ ಮಾಡಿದ ಪ್ರಮುಖ ಚಾನೆಲ್ಗಳು

ವರದಿಗಳ ಪ್ರಕಾರ, ಜಿಯೋಸ್ಟಾರ್ ಕಲರ್ಸ್ ಒಡಿಯಾ, ಎಂಟಿವಿ ಬೀಟ್ಸ್, ವಿಎಚ್1 ಮತ್ತು ಕಾಮಿಡಿ ಸೆಂಟ್ರಲ್ ಚಾನೆಲ್ಗಳ ಪರವಾನಗಿಗಳನ್ನು ವಾಪಸ್ ನೀಡಿದೆ. ಜೀ ಎಂಟರ್ಟೈನ್ಮೆಂಟ್ ತನ್ನ ಜೀ ಸೀ ಚಾನೆಲ್ ಅನ್ನು ಬಂದ್ ಮಾಡಿದ್ದು, ಎಂಟರ್10 ಮೀಡಿಯಾ ದಂಗಲ್ ಎಚ್‌ಡಿ ಹಾಗೂ ದಂಗಲ್ ಒರಿಯಾ ಸೇರಿದಂತೆ ಹಲವು ಚಾನೆಲ್ಗಳ ಪರವಾನಗಿಗಳನ್ನು ಬಿಟ್ಟುಕೊಟ್ಟಿದೆ. ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾದ ಪೋಷಕ ಸಂಸ್ಥೆ ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ ಕೂಡ 26 ಡೌನ್‌ಲಿಂಕಿಂಗ್ ಅನುಮತಿಗಳನ್ನು ವಾಪಸ್ ನೀಡಿದೆ.

ಕುಸಿಯುತ್ತಿರುವ ರೇಟಿಂಗ್ – ಆತಂಕಕಾರಿ ಅಂಕಿ ಅಂಶಗಳು

ಡಿಸೆಂಬರ್ 11, 2025ರಂದು ಬಿಡುಗಡೆಯಾದ ಕ್ರಿಸಿಲ್ ವರದಿ ಪ್ರಕಾರ, ಭಾರತೀಯ ಖಾಸಗಿ ಡಿಟಿಎಚ್ ಟಿವಿ ಪೂರೈಕೆದಾರರ ಆದಾಯವು ಶೇಕಡಾ 3–4ರಷ್ಟು ಕುಸಿದಿದೆ. 2019ರಲ್ಲಿ 7.2 ಕೋಟಿ ಇದ್ದ ಚಂದಾದಾರರ ಸಂಖ್ಯೆ 2024ಕ್ಕೆ 6.19 ಕೋಟಿಗೆ ಇಳಿದಿದ್ದು, 2025ರ ಅಂತ್ಯದ ವೇಳೆಗೆ ಇದು 5.1 ಕೋಟಿಗೂ ಕಡಿಮೆಯಾಗುವ ನಿರೀಕ್ಷೆಯಿದೆ.

ಟಿವಿ ಮಾಧ್ಯಮದ ಭವಿಷ್ಯ ಏನು?

ಡಿಜಿಟಲ್ ವೇದಿಕೆಗಳ ವೇಗದ ಬೆಳವಣಿಗೆ, ವೈಯಕ್ತಿಕಗೊಳಿಸಿದ ವಿಷಯಗಳು ಮತ್ತು ಕಡಿಮೆ ವೆಚ್ಚದ ಜಾಹೀರಾತು ವ್ಯವಸ್ಥೆ—ಇವೆಲ್ಲವೂ ಟಿವಿ ಮಾಧ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಮತ್ತು ವಿಷಯದಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಟಿವಿ ಮಾಧ್ಯಮ ಬದುಕುಳಿಯಬಹುದೇ ಎಂಬ ಪ್ರಶ್ನೆ ಈಗ ಗಂಭೀರವಾಗಿ ಎದುರಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-26 12:48:39
No Reviews