ಎಂಎಸ್‌ಐಎಲ್‌ ಚಿಟ್‌ ವ್ಯವಹಾರ ವಿಸ್ತರಣೆ—₹5,000 ಕೋಟಿ ಗುರಿ

ಕೇರಳದ ಸರ್ಕಾರಿ ಹಣಕಾಸು ಸಂಸ್ಥೆಗಳು ವರ್ಷಕ್ಕೆ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿ 45 ಲಕ್ಷ ಗ್ರಾಹಕರ ವಿಶ್ವಾಸ ಗಳಿಸಿರುವ ಮಾದರಿಯನ್ನು ಅನುಸರಿಸಿ, ಎಂಎಸ್‌ಐಎಲ್‌ ಚಿಟ್‌ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಕೇರಳದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅನುಭವಿಗಳನ್ನೇ ಎಂಎಸ್‌ಐಎಲ್‌ ಸಮಾಲೋಚಕರಾಗಿ ನೇಮಿಸಲಾಗಿದೆ.

ಸುಗಮ ಹಾಗೂ ಪಾರದರ್ಶಕ ವ್ಯವಹಾರಕ್ಕಾಗಿ ಎಂಎಸ್‌ಐಎಲ್‌ ಚಿಟ್ಸ್‌ ಸಾಫ್ಟ್‌ವೇರ್‌ ಮತ್ತು ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, 27 ಶಾಖೆಗಳ ಜಾಲವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಿಗೆ ವಿಸ್ತರಿಸುವ ಗುರಿಯಿದೆ. ಗ್ರಾಮೀಣ ಪ್ರದೇಶಗಳು, ಮಹಿಳೆಯರ ಉಳಿತಾಯ, ಸ್ವಸಹಾಯ ಸಂಘಗಳಿಗೆ ವಿಶೇಷ ಸ್ಕೀಮ್‌ಗಳು, 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮತ್ತು ಮನೆ ಮನೆಗೂ ಎಂಎಸ್‌ಐಎಲ್‌ ಚಿಟ್‌ ತಲುಪಿಸುವ ದೃಢ ಸಂಕಲ್ಪವನ್ನು ಸಚಿವ ಎಂ.ಬಿ. ಪಾಟೀಲ ವಿವರಿಸಿದರು.

ಯುಪಿಐ, ವೆಬ್‌ಸೈಟ್‌, ಆನ್‌ಲೈನ್‌ ಪಾವತಿ ಹಾಗೂ ಬಿಡ್‌ ಸೌಲಭ್ಯಗಳೊಂದಿಗೆ ಡಿಜಿಟಲ್‌ ಚಿಟ್‌ ವ್ಯವಸ್ಥೆ ಜಾರಿಯಾಗುತ್ತಿದ್ದು, ಸರ್ಕಾರಿ ನೌಕರರ ಹೂಡಿಕೆಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯುವ ಚಿಂತನೆಯೂ ನಡೆಯುತ್ತಿದ್ದು, ಇದು ಕೈಗೂಡಿದರೆ 20 ಲಕ್ಷ ಕುಟುಂಬಗಳಿಗೆ ಲಾಭವಾಗಲಿದೆ.

2024–25ರಲ್ಲಿ ಎಂಎಸ್‌ಐಎಲ್‌ 3,882 ಕೋಟಿ ರೂ. ವಹಿವಾಟು ನಡೆಸಿ 122 ಕೋಟಿ ರೂ.ಗೂ ಹೆಚ್ಚು ಲಾಭ ದಾಖಲಿಸಿದ್ದು, ‘ವಿಷನ್‌–2030’ ನೀಲನಕ್ಷೆಯ ಮೂಲಕ ಸಂಸ್ಥೆಯ ಬಲವರ್ಧನೆ ಹಾಗೂ ಸಿಎಸ್‌ಆರ್‌ ಉಪಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-07 15:42:09
No Reviews