ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ಚರ್ಚೆಯಲ್ಲಿ ಡಿ.ಕೆ. ಶಿವಕುಮಾರ್

ಶಾಲೆಗಳಲ್ಲಿ ಮಕ್ಕಳ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಈಗಾಗಲೇ ಕೆಲ ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ಜಾರಿಯಲ್ಲಿದೆ ಎಂದರು. ಮೊಬೈಲ್ ಬಳಕೆ ದುರುಪಯೋಗವಾಗುತ್ತಿರುವ ಹಲವು ಅಂಶಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಅದಕ್ಕಾಗಿ ಈ ವಿಷಯ ಗಂಭೀರ ಚರ್ಚೆಯಲ್ಲಿದೆ ಎಂದು ಹೇಳಿದರು.

ಸಚಿವ ಮಹದೇವಪ್ಪ ಅವರು ಎತ್ತಿದ ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, “ಅವರು ನಮ್ಮ ರಾಷ್ಟ್ರೀಯ ನಾಯಕರು, ಅವರಿಗೆ ಇಲ್ಲಿಂದಲೇ ನಮಸ್ಕಾರ” ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು. ಬೆಂಗಳೂರಿನ ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಕುರಿತು ಮಾತನಾಡಿ, ಕೆರೆಗಳ ಉದ್ದೇಶ ಅಂತರ್ಜಲ ಹೆಚ್ಚಳವಾಗಿದ್ದು, ಕುಡಿಯಲು ಅಥವಾ ಸ್ನಾನಕ್ಕೆ ಸರ್ಕಾರ ಸೂಚಿಸಿಲ್ಲ ಎಂದರು. ತಿಪ್ಪಗೊಂಡನಹಳ್ಳಿ ಕೆರೆಯ ನೀರನ್ನು ಮಾತ್ರ ಬಿಡಬ್ಲ್ಯುಎಸ್‌ಎಸ್‌ಬಿ ಮೂಲಕ ಶುದ್ಧೀಕರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ವಿಬಿ ಗ್ರಾಮ್ ಜಿ ವಿಷಯದಲ್ಲಿ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ಅಥವಾ ನಿರ್ದೇಶನ ನೀಡಿಲ್ಲ ಎಂದು ಅವರು ಆರೋಪಿಸಿದರು. ಕೂಲಿ ಕಾರ್ಮಿಕರಿಗೆ ಹಣ ಬಿಡುಗಡೆ ಆಗದೇ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಟೀಕಿಸಿದ ಅವರು, ಬಡವರು ಮತ್ತು ಕಾರ್ಮಿಕರ ಪರವಾಗಿ ದೊಡ್ಡ ಹೋರಾಟ ನಡೆಯುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ ‘ನರೇಗಾ ಬಚಾವ್’ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-23 16:30:21
No Reviews