ಹೊಸ ಸಿನಿಮಾಗೆ 80 ಕೋಟಿ ಸಂಭಾವನೆ ಕೇಳಿದರಾ ರಿಷಬ್ ಶೆಟ್ಟಿ?

ಇದೇ ಕಾರಣಕ್ಕೆ ಪರಭಾಷೆಯ ದೊಡ್ಡ ನಿರ್ಮಾಪಕರು ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಈ ನಡುವೆ, ಹೊಸ ಸಿನಿಮಾಗೆ ಅವರು ಬರೋಬ್ಬರಿ 80 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಷ್ಟಪಟ್ಟು ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕೊಂಡಿರುವ ರಿಷಬ್ ಶೆಟ್ಟಿ, ಕೆಲ ವರ್ಷಗಳ ಹಿಂದೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ ‘ಕಾಂತಾರ’ ಸಿನಿಮಾ ಅವರ ಬದುಕನ್ನೇ ಬದಲಿಸಿತು. ‘ಕಾಂತಾರ: ಚಾಪ್ಟರ್ 1’ ಭರ್ಜರಿ ಯಶಸ್ಸಿನ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ಅವರ ಡಿಮ್ಯಾಂಡ್ ಕೂಡ ಗಣನೀಯವಾಗಿ ಹೆಚ್ಚಾಯಿತು.

ಪ್ರಸ್ತುತ ರಿಷಬ್ ಶೆಟ್ಟಿ ‘ಜೈ ಹನುಮಾನ್’, ‘ಛತ್ರಪತಿ ಶಿವಾಜಿ ಮಹಾರಾಜ್’ ಸೇರಿದಂತೆ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ಮೂಲಕ ಅವರ ಮಾರುಕಟ್ಟೆ ಮತ್ತಷ್ಟು ವಿಸ್ತಾರಗೊಂಡಿದೆ. ಅದಕ್ಕೆ ತಕ್ಕಂತೆ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಪ್ರತಿ ಸಿನಿಮಾಗೆ 80 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ನಿರ್ದೇಶಕರಾಗಿ ‘ಕಿರಿಕ್ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, ‘ಕಾಂತಾರ’ ಮತ್ತು ಅದರ ಮುಂದುವರಿದ ಭಾಗಗಳ ಮೂಲಕ ರಿಷಬ್ ಶೆಟ್ಟಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ನಟನಾಗಿಯೂ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಯಶಸ್ಸೇ ಅವರ ಸಂಭಾವನೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ‘ಕಾಂತಾರ: ಚಾಪ್ಟರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ವರದಿಯಿದೆ. ಇದರಿಂದ ಅವರನ್ನು ನಂಬಿಕೊಂಡು ಹಣ ಹೂಡುವ ನಿರ್ಮಾಪಕರಿಗೆ ನಷ್ಟವಾಗುವುದಿಲ್ಲ ಎಂಬ ವಿಶ್ವಾಸ ಮತ್ತಷ್ಟು ಬಲವಾಗಿದೆ.

ಆದರೆ ಸದ್ಯಕ್ಕೆ 80 ಕೋಟಿ ಸಂಭಾವನೆ ಕುರಿತು ಹರಿದಾಡುತ್ತಿರುವ ಮಾಹಿತಿ ಕೇವಲ ಅಂತೆ–ಕಂತೆಗಳ ಮಟ್ಟದಲ್ಲಿದೆ. ರಿಷಬ್ ಶೆಟ್ಟಿ ಅಥವಾ ಯಾವುದೇ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಕೆಲವು ಪರಭಾಷಾ ಮಾಧ್ಯಮಗಳು ಮಾತ್ರ ಈ ಕುರಿತು ವರದಿ ಪ್ರಕಟಿಸಿವೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-03 19:04:26
No Reviews