2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ – ಗಂಗಾವತಿಯಿಂದಲೇ ಸ್ಪರ್ಧೆ ಘೋಷಿಸಿದ ರೆಡ್ಡಿ!

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ-ಡಿಸಿಎಂ ಅಧಿಕಾರ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.

“ಧೀರನಾಗಿದ್ದರೆ, ಶೂರನಾಗಿದ್ದರೆ ಸ್ವಂತ ಬಲದ ಮೇಲೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕು. ಆದರೆ ಹೈಕಮಾಂಡ್ ಹೇಳಿದರೆ ಕುರ್ಚಿ ಬಿಟ್ಟು ಬಿಡುತ್ತೇನೆ ಎಂದು ಹೇಳುತ್ತಾ ಕುರ್ಚಿಗೆ ಅಂಟಿಕೊಂಡಿರುವುದು ಹೇಡಿತನ” ಎಂದು ರೆಡ್ಡಿ ಲೇವಡಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಕುರಿತು ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ ಎಂದು ಹೇಳಿದ ಅವರು, “ಪ್ರಧಾನಿ ಮೋದಿ ಹೇಡಿಯಲ್ಲ, ಸಿದ್ದರಾಮಯ್ಯನೇ ಹೇಡಿ” ಎಂದು ಟೀಕಿಸಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಕುರ್ಚಿ ಕಿತ್ತಾಟದಿಂದ ಕಾಂಗ್ರೆಸ್ ಶಾಸಕರು ಹಾಗೂ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಜನರಲ್ಲಿ ಮೂಡಿದೆ. ಜನರು ಈ ಸರ್ಕಾರದಿಂದ ರೋಸಿ ಹೋಗಿದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾಯುತ್ತಿದ್ದಾರೆ. 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ರೆಡ್ಡಿ, “ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಗಂಗಾವತಿ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆಯಲ್ಲೂ ಗಂಗಾವತಿಯಿಂದಲೇ ಸ್ಪರ್ಧಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು. ಸಚಿವನಾಗಿದ್ದಾಗ ಹಂಪಿ ಮತ್ತು ಹೊಸಪೇಟೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಅವುಗಳ ಫಲಿತಾಂಶ ಇಂದಿಗೂ ಕಾಣಿಸುತ್ತಿವೆ ಎಂದು ತಮ್ಮ ಹಿಂದಿನ ಅಧಿಕಾರದ ದಿನಗಳನ್ನು ಸ್ಮರಿಸಿದರು.

ಹಂಪಿಯಲ್ಲಿ ಥೀಮ್ ಪಾರ್ಕ್ ನಿರ್ಮಾಣ, ಹೊಸಪೇಟೆ-ಬಳ್ಳಾರಿ ಮಧ್ಯೆ ವಿಮಾನ ನಿಲ್ದಾಣ ನಿರ್ಮಿಸಿ ಹಂಪಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆ, ‘ಹಂಪಿ ಬೈ ಸ್ಕೈ’ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕನಸುಗಳನ್ನು ರೂಪಿಸಿದ್ದೆವು. ಆದರೆ ಅವುಗಳನ್ನು ಮುಂದುವರೆಸಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ, ಬಳ್ಳಾರಿಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ ಅವರು, ಸಿಬಿಐ ತನಿಖೆ ವಹಿಸಲು ಕೋರಿ ಇನ್ನು ಎರಡು ದಿನಗಳಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-11 11:45:30
No Reviews