ಕ್ವಾಲಿಫೈಯರ್ 1ರಲ್ಲಿ RCB ಸೋತರೆ ಮುಂದೇನು? ಇನ್ನೊಂದು ಚಾನ್ಸ್ ಇದೆಯಾ?

ಧರ್ಮಶಾಲಾ, ಮೇ 23: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪ್ಲೇಆಫ್ ಹಂತ ರೋಚಕ ತಿರುವು ಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಹಾಲಿ ಚಾಂಪಿಯನ್ Royal Challengers Bengaluru ಹಾಗೂ ಎರಡನೇ ಸ್ಥಾನದಲ್ಲಿರುವ ಗುಜರಾತ್ ತಂಡಗಳು ಮೇ 26ರಂದು ಧರ್ಮಶಾಲಾದಲ್ಲಿ ಕ್ವಾಲಿಫೈಯರ್-1ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ.

ಪ್ಲೇಆಫ್ ನಿಯಮದಂತೆ, ಅಗ್ರ ಎರಡು ಸ್ಥಾನ ಪಡೆದ ತಂಡಗಳಿಗೆ ಒಂದು ಭದ್ರತೆ ಇದೆ. ಕ್ವಾಲಿಫೈಯರ್-1ರಲ್ಲಿ ಸೋತರೂ ಅವರ IPL 2026 ಕನಸು ಮುಗಿಯುವುದಿಲ್ಲ.

ಮೂರನೇ ಸ್ಥಾನ ಪಡೆದ Sunrisers Hyderabad ಹಾಗೂ ನಾಲ್ಕನೇ ಸ್ಥಾನ ಪಡೆಯಲಿರುವ ತಂಡ ಮೇ 27ರಂದು ಎಲಿಮಿನೇಟರ್‌ನಲ್ಲಿ ಸೆಣಸಾಟ ನಡೆಸಲಿವೆ. ಆ ಪಂದ್ಯದಲ್ಲಿ ಗೆದ್ದ ತಂಡವು ಕ್ವಾಲಿಫೈಯರ್-1 ಸೋತ ತಂಡದೊಂದಿಗೆ ಮೇ 29ರಂದು ಕ್ವಾಲಿಫೈಯರ್-2ನಲ್ಲಿ ಆಡಲಿದೆ. ಅಲ್ಲಿ ಜಯಿಸಿದ ತಂಡ ಫೈನಲ್ (ಮೇ 31) ತಲುಪಲಿದೆ.

ಇತ್ತ, ರಾಜೀವ್ ಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಬ್ಯಾಟಿಂಗ್ ಅಬ್ಬರಿಸಿತು. ಅಭಿಷೇಕ್ ಶರ್ಮಾ (56), ಇಶಾನ್ ಕಿಶನ್ (79) ಮತ್ತು ಹೆನ್ರಿಚ್ ಕ್ಲಾಸೆನ್ (51) ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ತಂಡವು 20 ಓವರ್‌ಗಳಲ್ಲಿ 255/4 ಎಂಬ ಭಾರೀ ಮೊತ್ತ ದಾಖಲಿಸಿತು.

ಗುರಿ ಬೆನ್ನಟ್ಟಿದ RCB ಆರಂಭದಲ್ಲಿ ವೇಗದ ಹೊಡೆತ ನೀಡಿದರೂ, ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ವೆಂಕಟೇಶ್ ಅಯ್ಯರ್ 19 ಎಸೆತಕ್ಕೆ 44 ರನ್‌ಗಳ ಸ್ಪೋಟಕ ಆರಂಭ ನೀಡಿದರು. ಆದರೆ ವಿರಾಟ್ ಕೊಹ್ಲಿ (15) ಮತ್ತು ದೇವದತ್ ಪಡಿಕ್ಕಲ್ (15) ಬೇಗನೇ ಔಟಾದರು. ನಾಯಕ ರಜತ್ ಪಾಟೀದಾರ್ 56 ರನ್ ಮತ್ತು ಕೃನಾಲ್ ಪಾಂಡ್ಯ 41* ರನ್ ಗಳಿಸಿ ಹೋರಾಟ ಮುಂದುವರಿಸಿದರೂ, ತಂಡವು 20 ಓವರ್‌ಗಳಲ್ಲಿ 200/4ಕ್ಕೆ ನಿಂತಿತು.

ಒಟ್ಟಾರೆ ಸನ್‌ರೈಸರ್ಸ್ ಬ್ಯಾಟಿಂಗ್ ಶಕ್ತಿ ಎದುರು RCB ಹೋರಾಟ ಕಡಿಮೆಯಾಯಿತು. ಪ್ಲೇಆಫ್ ಹಂತದಲ್ಲಿ ಈಗ ಮತ್ತಷ್ಟು ತೀವ್ರ ಪೈಪೋಟಿ ಎದುರಾಗಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-23 11:20:15
No Reviews