ಪಂಚರಾಜ್ಯ ಚುನಾವಣೆ ನಡುವೆ ದರ ಏರಿಕೆ ಗಾಸಿಪ್? ಸತ್ಯ ಏನು?

ಬೆಂಗಳೂರು: ಪಂಚರಾಜ್ಯ ಚುನಾವಣೆ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಏರಿಕೆಯಾಗಿವೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಲವರು ಈ ಪೋಸ್ಟ್‌ಗಳನ್ನು ನಿಜವೆಂದು ಭಾವಿಸಿ ಹಂಚಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದೇ ವೇಳೆ ಪೆಟ್ರೋಲ್‌ಗೆ ₹10 ಹಾಗೂ ಡೀಸೆಲ್‌ಗೆ ₹12.50 ಹೆಚ್ಚಳ ಮಾಡಲಾಗಿದೆ ಎಂಬಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಸರಿನಲ್ಲಿ ನಕಲಿ ಆದೇಶ ಪತ್ರವೊಂದು ಕೂಡ ವೈರಲ್ ಆಗಿದೆ. ಈ ಪತ್ರವನ್ನು ನಿಜವೆಂದು ಭಾವಿಸಿ ಹಲವು ಬಳಕೆದಾರರು ಶೇರ್ ಮಾಡುತ್ತಿರುವುದು ಕಂಡುಬಂದಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಪಿಐಬಿ ಫ್ಯಾಕ್ಟ್ ಚೆಕ್, ಈ ಆದೇಶ ಸಂಪೂರ್ಣ ನಕಲಿ ಎಂದು ದೃಢಪಡಿಸಿದೆ. ಭಾರತ ಸರ್ಕಾರ ಇಂತಹ ಯಾವುದೇ ಬೆಲೆ ಏರಿಕೆ ಆದೇಶವನ್ನು ಹೊರಡಿಸಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಇಂತಹ ತಪ್ಪುಮಾಹಿತಿಗಳನ್ನು ನಂಬದೆ, ಯಾವಾಗಲೂ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳು ಹಾಗೂ ನಂಬಲರ್ಹ ಮೂಲಗಳಿಂದ ಮಾತ್ರ ಮಾಹಿತಿ ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-29 17:27:25
No Reviews