ಕಟ್ಟುನಿಟ್ಟಿನ ನಿಯಮ: ರಾತ್ರಿ ಬೈಕ್ ಚಲನವಲನ ನಿಷೇಧ

ಕೊಲ್ಕತ್ತಾ: ವಿಧಾನಸಭಾ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ದ್ವಿಚಕ್ರ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೆ ತಂದಿದೆ. ಮತದಾನಕ್ಕೆ ಎರಡು ದಿನಗಳ ಮುನ್ನದಿಂದ ಈ ನಿಯಮಗಳು ಜಾರಿಗೆ ಬಂದಿದ್ದು, ಏಪ್ರಿಲ್ 23ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಒಳಪಡುವ 152 ವಿಧಾನಸಭಾ ಕ್ಷೇತ್ರಗಳಿಗೂ ಅನ್ವಯವಾಗಲಿದೆ.

ಆದೇಶದ ಪ್ರಕಾರ, ಸಂಜೆ 6 ರಿಂದ ಬೆಳಿಗ್ಗೆ 6ರವರೆಗೆ ವೈದ್ಯಕೀಯ ತುರ್ತು ಅಥವಾ ಕುಟುಂಬ ಸಂಬಂಧಿತ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಬೈಕ್ ಹಾಗೂ ಸ್ಕೂಟರ್ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜೊತೆಗೆ ಬೈಕ್ ರ್ಯಾಲಿಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಹಗಲಿನ ವೇಳೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಕೂಡ ಹಿಂಬದಿ ಸವಾರರ ಸಂಚಾರವನ್ನು ಕೇವಲ ಅಗತ್ಯ ಕಾರ್ಯಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಮತದಾನದ ದಿನದಲ್ಲಿ ಮಾತ್ರ ಮತದಾನ ಮತ್ತು ಅಗತ್ಯ ಕಾರ್ಯಗಳಿಗೆ ಕುಟುಂಬ ಸದಸ್ಯರಿಗೆ ಸ್ವಲ್ಪ ಸಡಿಲಿಕೆ ನೀಡಲಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಶಾಂತಿ, ಪಾರದರ್ಶಕತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ಮತದಾರರ ಪಟ್ಟಿಯ ಪರಿಶೀಲನೆ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-21 19:05:43
No Reviews