ಹೈಕಮಾಂಡ್ ಒತ್ತಡಕ್ಕೆ ನಜೀರ್ ಅಹ್ಮದ್ ರಾಜೀನಾಮೆ

ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ನಜೀರ್ ಅಹ್ಮದ್ ಅಧಿಕೃತವಾಗಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೀಡಿದ್ದ ಕಟ್ಟುನಿಟ್ಟಿನ ಸೂಚನೆ ಮತ್ತು ಅಂತಿಮ ಗಡುವಿನ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸೋಮವಾರ (ಏಪ್ರಿಲ್ 13) ರಂದು ಸುರ್ಜೇವಾಲಾ ಅವರು ನಜೀರ್ ಅಹ್ಮದ್ ಅವರಿಗೆ ರಾಜೀನಾಮೆ ಸಲ್ಲಿಸಲು ಅಂತಿಮ ಗಡುವು ವಿಧಿಸಿದ್ದರು. ಜೊತೆಗೆ ನಿಗದಿತ ಸಮಯದೊಳಗೆ ರಾಜೀನಾಮೆ ನೀಡದಿದ್ದರೆ, ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಪಕ್ಷದ ವರಿಷ್ಠರ ಕಠಿಣ ನಿಲುವಿನಿಂದಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕಿದ ನಜೀರ್ ಅಹ್ಮದ್, ಕೊನೆಗೂ ತಮ್ಮ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ. ಈ ಮೂಲಕ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಹುದ್ದೆ ಬದಲಾವಣೆ ಕುರಿತ ಚರ್ಚೆಗಳಿಗೆ ಅಂತ್ಯ ಬಿದ್ದಂತಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಜೀರ್ ಅಹ್ಮದ್ ಪ್ರಚಾರದಿಂದ ದೂರ ಉಳಿದಿದ್ದರು. ಈ ನಡೆ ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿ, ರಾಜೀನಾಮೆಗೆ ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಅಬ್ದುಲ್ ಜಬ್ಬಾರ್ ಅವರಿಗೂ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿತ್ತು.

ಈ ಬೆಳವಣಿಗೆಗಳ ಸರಣಿಯಲ್ಲಿ ಈಗ ನಜೀರ್ ಅಹ್ಮದ್ ಅವರ ರಾಜೀನಾಮೆ ಅಧಿಕೃತಗೊಂಡಿದ್ದು, ರಾಜ್ಯ ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-14 10:23:28
No Reviews