ಬೆಂಗಳೂರಿಗರಿಗೆ ನಮ್ಮ ಮೆಟ್ರೋದ ಮತ್ತೊಂದು ಸಿಹಿ ಸುದ್ದಿ!

ಈ ಮಾರ್ಗಕ್ಕೆ ಸಂಬಂಧಿಸಿದಂತೆ ಎರಡನೇ ಮೆಟ್ರೋ ರೈಲು ಯಶಸ್ವಿಯಾಗಿ ಕೊತ್ತನೂರು ಡಿಪೋಗೆ ಆಗಮಿಸಿದ್ದು, ಯೋಜನೆಯ ಪ್ರಗತಿಗೆ ಹೊಸ ಚೈತನ್ಯ ನೀಡಿದೆ. ಏಪ್ರಿಲ್ ತಿಂಗಳಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿಗರಿಗೆ ನಮ್ಮ ಮೆಟ್ರೋದ ಮತ್ತೊಂದು ಸಿಹಿ ಸುದ್ದಿಯಾಗಿ, ಪಿಂಕ್ ಲೈನ್‌ಗೆ ಎರಡನೇ ರೈಲು ಸೇರಿಕೊಂಡಿದೆ. ಇದರ ಬೋಗಿಗಳು ಈಗಾಗಲೇ ಕೊತ್ತನೂರು ಡಿಪೋ ತಲುಪಿದ್ದು, ಮುಂದಿನ ಹಂತದ ಪರೀಕ್ಷಾ ಕಾರ್ಯಗಳಿಗೆ ಸಿದ್ಧತೆ ನಡೆಯುತ್ತಿದೆ. ಇದರಿಂದ ದಕ್ಷಿಣ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ.

ಏಪ್ರಿಲ್‌ನಲ್ಲಿ ಮೊದಲ ಹಂತದ ಸಂಚಾರ

ಒಟ್ಟು 21.26 ಕಿಲೋಮೀಟರ್ ಉದ್ದದ ಪಿಂಕ್ ಲೈನ್ ಮಾರ್ಗದಲ್ಲಿ 7.5 ಕಿಲೋಮೀಟರ್ ಎಲಿವೇಟೆಡ್ ವಿಭಾಗವಿದ್ದು, ಈ ಭಾಗದಲ್ಲಿ ಈಗಾಗಲೇ ಪರೀಕ್ಷಾ ಕಾರ್ಯಗಳು ಆರಂಭವಾಗಿವೆ. ಎಲಿವೇಟೆಡ್ ಮಾರ್ಗದಲ್ಲಿ ಆರು ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಹಾಗೂ ರೈಲುಗಳ ತಾಂತ್ರಿಕ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಮೆಟ್ರೋ ಸಂಚಾರ ಆರಂಭಿಸಲು BMRCL ಸಿದ್ಧತೆ ನಡೆಸುತ್ತಿದೆ. ಈ ಮಾರ್ಗವನ್ನು ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ತೆರೆದರೆ, ದಕ್ಷಿಣ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಒತ್ತಡ ತಗ್ಗಲಿದೆ ಎನ್ನಲಾಗುತ್ತಿದೆ.

ಉಳಿದ 13.76 ಕಿಲೋಮೀಟರ್ ಅಂಡರ್ಗ್ರೌಂಡ್ ಮಾರ್ಗದ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಎಲ್ಲಾ ಕೆಲಸಗಳು ಪೂರ್ಣಗೊಂಡ ಬಳಿಕ ವರ್ಷದ ಅಂತ್ಯಕ್ಕೆ ಸಂಪೂರ್ಣ ಪಿಂಕ್ ಲೈನ್ ಉದ್ಘಾಟಿಸುವ ಗುರಿಯನ್ನು BMRCL ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲುಗಳ ಜೋಡಣೆ ನಂತರ ಸಂಪೂರ್ಣ ಮಾರ್ಗದಲ್ಲಿ ಟ್ರ್ಯಾಕ್ ಪರೀಕ್ಷೆ ಆರಂಭವಾಗಲಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-04 11:20:29
No Reviews