ಮೆಟ್ರೋ ದರ ಏರಿಕೆ ವಿರುದ್ಧ ತೇಜಸ್ವಿ ಸೂರ್ಯ ಪ್ರತಿಭಟನೆ, ಬಂಧನ

ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಸಾರ್ವಜನಿಕ ಸಾರಿಗೆ ಹಾಗೂ ಉತ್ತಮ ಮೂಲಸೌಕರ್ಯಕ್ಕೆ ಧ್ವನಿ ಎತ್ತಿದರೆ ಬಂಧನ ಎದುರಾಗುತ್ತದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಬೆಂಗಳೂರಿಗಾಗಿ ಹೋರಾಟ ಮಾಡುವುದು ಅಪರಾಧವೇ ಆಗಿದ್ದರೆ, ನಾನು ಸಾವಿರ ಬಾರಿ ಬಂಧನಕ್ಕೊಳಗಾಗಲು ಸಿದ್ಧ ಎಂದು ಹೇಳಿದ ಅವರು, ಮೆಟ್ರೋ ದರ ಏರಿಕೆ ಮಧ್ಯಮ ವರ್ಗದ ಜನರಿಗೆ ಭಾರವಾಗಿದ್ದು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ನಾನು ಪ್ರತಿಭಟನೆ ನಡೆಸುತ್ತಿಲ್ಲ, ಕೇವಲ ಖಾಲಿ ಟ್ರಂಕ್ ಹಿಡಿದಿದ್ದೇನೆ; ನನ್ನನ್ನು ಯಾರೂ ತಡೆಯಬಾರದು ಎಂದು ಹೇಳಿದ ತೇಜಸ್ವಿ ಸೂರ್ಯ, ಸಂಸತ್ ಅಧಿವೇಶನ ನಡೆಯುವ ವೇಳೆ ನನ್ನನ್ನು ವಶಕ್ಕೆ ಪಡೆಯುವುದು ಸರಿಯಲ್ಲ, ಕಾನೂನು ತಿಳಿದು ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದರು. ಆದರೂ ಅವರನ್ನು ವಶಕ್ಕೆ ಪಡೆದ ಪೊಲೀಸರು, ಟ್ರಂಕ್ ಮೇಲೆ ಅಂಟಿಸಿದ್ದ ‘ಖಾಲಿ ಟ್ರಂಕ್ ಸರ್ಕಾರ’ ಎಂಬ ಪೋಸ್ಟರ್‌ಗಳನ್ನು ತೆರವುಗೊಳಿಸಿದರು.

ಇದೇ ವೇಳೆ ಬಿಜೆಪಿ ಮೌನ ಪ್ರತಿಭಟನೆಯಲ್ಲಿ ಮಾತನಾಡಿದ ರಾಮಮೂರ್ತಿ, ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಬಂದಿರುವುದು ಒಳ್ಳೆಯದು ಎಂದರೂ, ದರ ಏರಿಕೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಈಗಿರುವ ದರವನ್ನೂ ಕಡಿಮೆ ಮಾಡಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆ ನಡೆಯುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆರ್‌ವಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಒಂದು ಕೆಎಸ್‌ಆರ್‌ಪಿ ತುಕಡಿಯೊಂದಿಗೆ ಬಿಎಂಆರ್‌ಸಿಎಲ್‌ ಭದ್ರತಾ ಸಿಬ್ಬಂದಿಯನ್ನೂ ನಿಲ್ದಾಣದ ಹೊರಭಾಗದಲ್ಲಿ ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಯಿತು. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-09 15:07:48
No Reviews