ಕರ್ನಾಟಕದಲ್ಲಿ ಮೇ 1ರಿಂದ ಹೊಸ ಮೋಟಾರು ವಾಹನ ನಿಯಮ ಜಾರಿ

ಬೆಂಗಳೂರು: ಕರ್ನಾಟಕ ಸರ್ಕಾರವು ಮೋಟಾರು ವಾಹನಗಳ ತೆರಿಗೆ ದರಗಳನ್ನು ಪರಿಷ್ಕರಿಸಿ, ಮೋಟಾರು ವಾಹನ ತಿದ್ದುಪಡಿ ವಿಧೇಯಕವನ್ನು ಮೇ 1ರಿಂದ ಜಾರಿಗೆ ತರಲಿದೆ. ಸಾರಿಗೆ ಇಲಾಖೆಗೆ ಈಗಾಗಲೇ ಸರ್ಕಾರದಿಂದ ಸೂಚನೆ ನೀಡಲಾಗಿದ್ದು, ಹೊಸ ದರಗಳು ನಾಳೆಯಿಂದಲೇ ರಾಜ್ಯಾದ್ಯಂತ ಅನ್ವಯವಾಗಲಿವೆ. ಈ ನಿರ್ಧಾರದಿಂದ ವಾಹನಗಳ ನೋಂದಣಿ ಪ್ರಕ್ರಿಯೆ ವೇಗಗೊಳ್ಳುವ ನಿರೀಕ್ಷೆಯಿದ್ದು, ವಾಹನ ಮಾಲೀಕರ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಾಹನಗಳ ಪ್ರತಿ ಆಸನದ ತೆರಿಗೆಯಲ್ಲಿ ₹1,000 ಕಡಿತ ಮಾಡಲಾಗಿದೆ. ಈ ಹಿಂದೆ ₹3,500 ಇದ್ದ ಪ್ರತಿ ಸೀಟಿನ ತೆರಿಗೆ ಈಗ ₹2,500ಕ್ಕೆ ಇಳಿಕೆಯಾಗಲಿದೆ. ಅದೇ ರೀತಿ ₹4,000 ಇದ್ದ ದರವು ₹3,000ಕ್ಕೆ ಪರಿಷ್ಕರಿಸಲಾಗಿದೆ.

ಹೆಚ್ಚಿನ ತೆರಿಗೆಯಿಂದಾಗಿ ಅನ್ಯ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡುವ ಪ್ರವೃತ್ತಿಯನ್ನು ತಡೆಯಲು ಹಾಗೂ ರಾಜ್ಯದಲ್ಲೇ ನೋಂದಣಿಗೆ ಉತ್ತೇಜನ ನೀಡಲು ಈ ತಿದ್ದುಪಡಿ ತರಲಾಗಿದೆ. ಟ್ರ್ಯಾಕ್ಟರ್, ಪವರ್ ಟಿಲ್ಲರ್, ಟ್ರೇಲರ್ ಸೇರಿದಂತೆ ವಾಣಿಜ್ಯ ವಾಹನಗಳ ತೆರಿಗೆ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಖಾಸಗಿ ಸೇವಾ ವಾಹನಗಳ ನೋಂದಣಿ ತೆರಿಗೆಯಲ್ಲೂ ಪರಿಷ್ಕರಣೆ ಮಾಡಲಾಗಿದೆ.

ಕರ್ನಾಟಕದಿಂದ ಹೊರ ರಾಜ್ಯಗಳಲ್ಲಿ ನೋಂದಣಿಯಾಗುವ ವಾಹನಗಳಿಗೆ ಶೇ 5ರಿಂದ 15ರಷ್ಟು ತೆರಿಗೆ ವಿಧಿಸಲಾಗುತ್ತದೆ. ವಾಹನದ ಮೌಲ್ಯದ ಆಧಾರದ ಮೇಲೆ ಈ ದರಗಳು ನಿಗದಿಯಾಗಿದ್ದು, ಈಗಾಗಲೇ ನೋಂದಣಿಯಾಗಿರುವ ವಾಹನಗಳಿಗೆ ನೋಂದಣಿ ವರ್ಷದ ಆಧಾರದ ಮೇಲೆ ಆಜೀವ ತೆರಿಗೆಯ ಶೇ 25ರಿಂದ 93ರಷ್ಟು ಮೊತ್ತ ಪಾವತಿಸಬೇಕಾಗುತ್ತದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-30 12:56:10
No Reviews