ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ: ಮಾರ್ಚ್ 31 ಬದಲು ಮಾರ್ಚ್ 30ಕ್ಕೆ ಘೋಷಣೆ

ಈ ಹಿಂದೆ 31.03.2026 ರಂದು ನಿಗದಿಪಡಿಸಿದ್ದ ರಜೆಯನ್ನು ಈಗ 30.03.2026ಕ್ಕೆ ಮಾರ್ಪಡಿಸಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.

ಜೈನ ಸಮುದಾಯದ ಜ್ಯೋತಿಷಿಗಳು ಹಾಗೂ ಧಾರ್ಮಿಕ ಮುಖಂಡರ ಅಭಿಪ್ರಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಾವೀರ ಜಯಂತಿ ಆಚರಣೆಯ ದಿನಾಂಕ ನಿಗದಿಪಡಿಸುವ ವಿಚಾರವಾಗಿ ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಆಗಮ ಪಂಡಿತರ ಅಭಿಪ್ರಾಯದ ಆಧಾರದಲ್ಲಿ ದಿನಾಂಕ ಬದಲಾವಣೆಗೆ ಶಿಫಾರಸ್ಸು ಮಾಡಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಯಂತಿ ದಿನಾಂಕವನ್ನು ನಿಗದಿಪಡಿಸುವಾಗ ವಿವಿಧ ಸಂಪ್ರದಾಯಗಳನ್ನು ಪರಿಗಣಿಸಲಾಗುತ್ತದೆ. ಕೆಲವರು ಸೂರ್ಯೋದಯದ ಸಮಯದಲ್ಲಿ ಇರುವ ತಿಥಿ ಅಥವಾ ನಕ್ಷತ್ರವನ್ನು ಮುಖ್ಯವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ದಿನಪೂರ್ತಿ ಇರುವ ತಿಥಿಯನ್ನು ಆಧಾರವಾಗಿ ತೆಗೆದುಕೊಳ್ಳುತ್ತಾರೆ. ಈ ಎರಡು ವಿಧಾನಗಳ ಪ್ರಕಾರ ಜಯಂತಿ ಆಚರಣೆ ನಡೆಯುತ್ತದೆ.



ಜೈನ ಸಮುದಾಯದ ಮನವಿ ಮೇರೆಗೆ ಮಹಾವೀರ ಜಯಂತಿ ರಜೆ ಮಾರ್ಪಡಿ

ಪೂರ್ವದಲ್ಲಿ ಪರಿಗಣಿಸಿದ್ದ ಪ್ರಕಾರ ಮಹಾವೀರ ಜಯಂತಿಯ ತಿಥಿ 30.03.2026ರ ಬೆಳಿಗ್ಗೆಯಿಂದ ಪ್ರಾರಂಭವಾಗಿ 31.03.2026ರ ಬೆಳಗ್ಗೆ 7 ಗಂಟೆಯವರೆಗೆ ಮುಂದುವರಿಯುತ್ತದೆ. ಸೂರ್ಯೋದಯ ಸಮಯದಲ್ಲಿ ತ್ರಯೋದಶಿ ತಿಥಿ ಇರುವುದರಿಂದ ಕೆಲವು ಸಂಪ್ರದಾಯಗಳಲ್ಲಿ ಅದನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಆದರೆ ಜೈನ ಸಮುದಾಯದ ಸಂಪ್ರದಾಯದ ಪ್ರಕಾರ ಅವರ ಧಾರ್ಮಿಕ ಗುರುಗಳ ಅಭಿಪ್ರಾಯವನ್ನು ಆಧಾರವಾಗಿ ತೆಗೆದುಕೊಂಡು 30.03.2026ರಂದು ಮಹಾವೀರ ಜಯಂತಿ ಆಚರಿಸುವುದು ಸೂಕ್ತವೆಂದು ಸೂಚಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ಜೈನ ಸಮುದಾಯದ ಜ್ಯೋತಿಷಿಗಳು ಮತ್ತು ಮುಖಂಡರು ಸರ್ಕಾರಕ್ಕೆ ರಜೆಯನ್ನು ಆ ದಿನವೇ ಘೋಷಿಸಲು ಮನವಿ ಸಲ್ಲಿಸಿದ್ದರು.

ಈ ಕಚೇರಿಯ ಆಗಮ ಪಂಡಿತರ ಪರಿಶೀಲನೆ ಹಾಗೂ ಅಭಿಪ್ರಾಯದ ಆಧಾರದ ಮೇಲೆ 31.03.2026 ರಂದು ನೀಡಲಾಗಿದ್ದ ಸಾರ್ವತ್ರಿಕ ರಜೆಯನ್ನು 30.03.2026ಕ್ಕೆ ಮಾರ್ಪಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಅದರಂತೆ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-07 12:36:19
No Reviews