LPG ಸಿಲಿಂಡರ್ ಕೊರತೆ ತಡೆಯುವ ಅಗತ್ಯ ಸರಕುಗಳ ಕಾಯ್ದೆ ಏನು?

ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯಿಂದ ಎಲ್‌ಪಿಜಿ ಪೂರೈಕೆಗೆ ಭೀತಿ ಉಂಟಾದ ಹಿನ್ನೆಲೆ, ಭಾರತ ತನ್ನ ಅಗತ್ಯದ ಸುಮಾರು 85–90% ಅಡುಗೆ ಅನಿಲವನ್ನು ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿಯ ನಂತರ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಆಮದು ಮಾರ್ಗದಲ್ಲಿ ಅಡ್ಡಿ ಉಂಟಾಗುವ ಸಾಧ್ಯತೆ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತುರ್ತು ಕ್ರಮವಾಗಿ ಸಂಸ್ಕರಣಾಗಾರಗಳಿಗೆ ಪ್ರೋಪೇನ್ ಮತ್ತು ಬ್ಯೂಟೇನ್ ಅನ್ನು ಕೇವಲ LPG ತಯಾರಿಕೆಗೆ ಮಾತ್ರ ಬಳಸುವಂತೆ ಆದೇಶಿಸಿದೆ. ಈ ಅನಿಲವನ್ನು ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳಿಗೆ ಮಾತ್ರ ಪೂರೈಸಬೇಕು ಎಂದು ಸೂಚಿಸಲಾಗಿದೆ.

ಇನ್ನೂ ಮುಂದೆ ಸಂಸ್ಕರಣಾಗಾರಗಳು ಈ ಅನಿಲಗಳನ್ನು ಪೆಟ್ರೋಕೆಮಿಕಲ್ ಉತ್ಪಾದನೆಗೆ ಬಳಸಲು ಅವಕಾಶವಿಲ್ಲ; ಉತ್ಪಾದಿತ LPG ಅನ್ನು ಮನೆ ಬಳಕೆಗೆ ಮಾತ್ರ ಮಾರಾಟ ಮಾಡಬೇಕು. ಈ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

1955ರ ಅತ್ಯಗತ್ಯ ವಸ್ತುಗಳ ಕಾಯ್ದೆ (Essential Commodities Act) ಸಂವಿಧಾನದ 9ನೇ ಶೆಡ್ಯೂಲ್ ಅಡಿಯಲ್ಲಿ ಬಂದು, ಜನರಿಗೆ ಅಗತ್ಯವಾದ ವಸ್ತುಗಳ ಬೆಲೆ, ಉತ್ಪಾದನೆ ಮತ್ತು ವಿತರಣೆಯನ್ನು ನಿಯಂತ್ರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಈ ಕಾಯ್ದೆಯಡಿ ಸರ್ಕಾರ ದಾಸ್ತಾನು ಮಿತಿ ನಿಗದಿಪಡಿಸಿ ಅಕ್ರಮ ಸಂಗ್ರಹಣೆ ತಡೆಯಬಹುದು. ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ನಡುವೆ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಕೊರತೆಯನ್ನು ತಡೆಯುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-10 14:15:19
No Reviews