ಒಂದೇ ಟಿಕೆಟ್‌, ಒಂದು ರಾತ್ರೆ ಚಾಲಕನಿಗೆ 10 ಕೋಟಿ ಲಾಟರಿ ಶಾಕ್

ಅದೃಷ್ಟಶಾಲಿ ವ್ಯಕ್ತಿಯನ್ನು ಪೃಥ್ವಿ ಸಿಂಗ್ ಎಂದು ಗುರುತಿಸಲಾಗಿದ್ದು, ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ದಬ್ವಾಲಿ ಸಮೀಪದ ಕಿಲಿಯನ್‌ವಾಲಿಯಲ್ಲಿ ಪಂಜಾಬ್ ಲೋಹ್ರಿ–ಮಕರ ಸಂಕ್ರಾಂತಿ 2026 ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದ ಅವರು, ಇದೀಗ 10 ಕೋಟಿ ರೂ.ಗಳ ಪ್ರಥಮ ಬಹುಮಾನ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ.

ಪೃಥ್ವಿಯ ತಂದೆ ದೇವಿಲಾಲ್ ಕೂಡ ಚಾಲಕರಾಗಿದ್ದು, ಪತ್ನಿ, ಮಗಳು, ಮಗ, ಸಹೋದರ ಹಾಗೂ ಮೂವರು ಸಹೋದರಿಯರನ್ನೊಳಗೊಂಡ ದೊಡ್ಡ ಕುಟುಂಬವಿದೆ. ಲಾಟರಿ ಗೆದ್ದ ಸುದ್ದಿ ತಿಳಿದ ಮೊದಲಿಗೆ ಪೃಥ್ವಿ ದಿಗ್ಭ್ರಮೆಗೊಂಡಿದ್ದು, “ಇನ್ನೂ ನಂಬಲು ಆಗುತ್ತಿಲ್ಲ. ಈ ಹಣವನ್ನು ಮಕ್ಕಳ ಭವಿಷ್ಯ ಭದ್ರಪಡಿಸಲು ಬಳಸುತ್ತೇನೆ. ಮೂರನೇ ಬಾರಿ ಟಿಕೆಟ್ ಖರೀದಿಸಿದಾಗಲೇ ಇಂಥ ಅದೃಷ್ಟ ಕೈಹಿಡಿಯುತ್ತದೆ ಎಂದು ಊಹಿಸಿರಲಿಲ್ಲ” ಎಂದು ಸಂತಸ ಹಂಚಿಕೊಂಡರು.

ಪೃಥ್ವಿಯ 6 ವರ್ಷದ ಮಗ ದಕ್ಷ ಲಾಟರಿ ಹಣದಿಂದ ಐಷಾರಾಮಿ ಕಾರು ಖರೀದಿಸುವ ಆಸೆ ವ್ಯಕ್ತಪಡಿಸಿದ್ದು, ಪತ್ನಿ ಸುಮನ್ ರಾಣಿ, “ದಿನವಿಡೀ ಜನರು ಅಭಿನಂದನೆ ಸಲ್ಲಿಸಲು ಮನೆಗೆ ಬರುತ್ತಿದ್ದಾರೆ. ನಾವು ತುಂಬಾ ಸಂತೋಷದಲ್ಲಿದ್ದೇವೆ. ಈ ಹಣದಿಂದ ಮಕ್ಕಳ ಕನಸುಗಳನ್ನು ನನಸಾಗಿಸಬೇಕೆಂಬುದೇ ನಮ್ಮ ಆಶಯ” ಎಂದು ಹೇಳಿದರು.

ಲಾಟರಿ ಟಿಕೆಟ್ ಸ್ಟಾಲ್ ಮಾಲೀಕ ಮದನ್ ಸಿಂಗ್, ಕಿಲಿಯನ್‌ವಾಲಿಯಲ್ಲಿ ವರ್ಷಗಳಿಂದ ಟಿಕೆಟ್ ಮಾರಾಟ ಮಾಡುತ್ತಿದ್ದು, ಈ ಬಾರಿ ಸಿರ್ಸಾದ ಪೃಥ್ವಿ 10 ಕೋಟಿ ರೂ.ಗಳ ಬಂಪರ್ ಬಹುಮಾನ ಗೆದ್ದಿದ್ದಾರೆ ಎಂದು ತಿಳಿಸಿದರು. ಮುಹಮ್ಮದ್‌ಪುರಿಯಾ ಗ್ರಾಮದ ಸರಪಂಚರು ಕೂಡ, ಈ ಜಯ ಗ್ರಾಮ ಮತ್ತು ಕುಟುಂಬದಲ್ಲಿ ಸಂಭ್ರಮದ ವಾತಾವರಣ ಮೂಡಿಸಿದೆ ಎಂದು ಹೇಳಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-20 12:42:05
No Reviews