ಮೇ 20 ಸೇವೆಗೆ ಗೈರಾದರೆ ಕ್ರಮ: KSRTC ನಿಂದ ಮುಷ್ಕರದ ವಿರುದ್ಧ ಖಡಕ್ ಎಚ್ಚರಿಕೆ

ಬೆಂಗಳೂರು: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ (KSRTC) ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಮುಷ್ಕರದಲ್ಲಿ ಭಾಗವಹಿಸಬಾರದು ಅಥವಾ ಯಾವುದೇ ರೀತಿಯ ಬೆಂಬಲ ನೀಡಬಾರದು ಎಂದು ಸ್ಪಷ್ಟ ಆದೇಶ ಹೊರಡಿಸಲಾಗಿದೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, “ನೋ ವರ್ಕ್ ನೋ ಪೇ” ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ತಿಳಿಸಿದ್ದಾರೆ. ಕೆಲಸಕ್ಕೆ ಗೈರಾಗುವ ಸಿಬ್ಬಂದಿಗೆ ವೇತನ ನೀಡಬಾರದು, ಜೊತೆಗೆ ಅನಿವಾರ್ಯ ಸಂದರ್ಭಗಳಲ್ಲಿ ವಾರದ ರಜೆಯನ್ನು ರದ್ದುಪಡಿಸಿ ಕರ್ತವ್ಯಕ್ಕೆ ನಿಯೋಜಿಸಲು ಸೂಚಿಸಲಾಗಿದೆ.

ಮೇ 20ರಂದು ಬಸ್ ಸೇವೆಯಲ್ಲಿ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಯಾವುದೇ ರೀತಿಯ ರಜೆ ಮಂಜೂರು ಮಾಡಬಾರದು ಎಂದು ಸಹ ನಿರ್ದೇಶನ ನೀಡಲಾಗಿದೆ. ಜೊತೆಗೆ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (Karnataka Act No-25/2015) ಅಡಿಯಲ್ಲಿ ಸಾರಿಗೆ ನೌಕರರಿಗೆ ಮುಷ್ಕರ ನಡೆಸುವ ಹಕ್ಕು ನಿರ್ಬಂಧಿತವಾಗಿದೆ ಎಂದು ಸಂಸ್ಥೆ ನೆನಪಿಸಿದೆ.

ಇದಕ್ಕೆ ಸಮಾನಾಂತರವಾಗಿ, ಸಾರಿಗೆ ನೌಕರರ ಸಂಘಟನೆಗಳು ಮೇ 19ರ ಮಧ್ಯಾಹ್ನದವರೆಗೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದು, ಬಳಿಕದ ಯಾವುದೇ ಮಾತುಕತೆ ಆಹ್ವಾನವನ್ನು ಸ್ವೀಕರಿಸುವುದಿಲ್ಲ ಎಂದು ಖಡಕ್ ಸಂದೇಶ ನೀಡಿವೆ. ಈ ಮೂಲಕ ಸರ್ಕಾರ ಮತ್ತು ಸಂಘಟನೆಗಳ ನಡುವೆ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-18 14:04:44
No Reviews