ಯೂತ್ ಒಡಿಐನಲ್ಲಿ ಹೊಸ ದಾಖಲೆ, ಕೊಹ್ಲಿಯನ್ನು ಹಿಂದಿಕ್ಕಿದ ವೈಭವ್ ಸೂರ್ಯವಂಶಿ!

ಯುಎಸ್ಎ ವಿರುದ್ಧ ಮೊದಲ ಪಂದ್ಯ ಗೆದ್ದ ಭಾರತ ತಂಡ, ಇದೀಗ ಬಾಂಗ್ಲಾದೇಶ ವಿರುದ್ಧವೂ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಯಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ, ಯೂತ್ ಒಡಿಐ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ, ಈ ಮೈಲುಗಲ್ಲು ತಲುಪಿದ ಭಾರತದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಝಿಂಬಾಬ್ವೆಯಲ್ಲಿ ನಡೆದ ಅಂಡರ್-19 ವಿಶ್ವಕಪ್‌ನ 7ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ವೈಭವ್ 67 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಫೋರ್‌ಗಳೊಂದಿಗೆ 72 ರನ್ ಬಾರಿಸಿದರು. ಈ ಅರ್ಧಶತಕದೊಂದಿಗೆ ಅವರು ಯೂತ್ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದರು.

ವಿರಾಟ್ ಕೊಹ್ಲಿ ಅಂಡರ್-19 ಏಕದಿನ ಕ್ರಿಕೆಟ್‌ನಲ್ಲಿ 28 ಪಂದ್ಯಗಳಲ್ಲಿ 978 ರನ್ ಗಳಿಸಿದ್ದರು. ಆದರೆ ವೈಭವ್ ಸೂರ್ಯವಂಶಿ ಕೇವಲ 20 ಪಂದ್ಯಗಳಲ್ಲಿ 1026 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಮೀರಿದ್ದಾರೆ.

ಈ ಮೂಲಕ ಯೂತ್ ಒಡಿಐ ಕ್ರಿಕೆಟ್‌ನಲ್ಲಿ 1000 ಕ್ಕೂ ಅಧಿಕ ರನ್ ಗಳಿಸಿದ ಭಾರತದ 7ನೇ ಬ್ಯಾಟರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರು ವಿಜಯ್ ಝೋಲ್ (1404 ರನ್). ಈ ದಾಖಲೆಯನ್ನು ಮುರಿಯಲು ವೈಭವ್‌ಗೆ ಇನ್ನೂ ಕೇವಲ 378 ರನ್ ಅಗತ್ಯವಿದ್ದು, ಮುಂದಿನ ಪಂದ್ಯಗಳಲ್ಲಿ ಮತ್ತೊಂದು ಮಹತ್ವದ ದಾಖಲೆ ನಿರೀಕ್ಷಿಸಬಹುದು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-18 11:09:45
No Reviews