ಧ್ರುವ ಸರ್ಜಾ ನಟನಗೆ ಫುಲ್ ಮಾರ್ಕ್ಸ್: ಫ್ಯಾನ್ಸ್ ಪ್ರತಿಕ್ರಿಯೆ ಏನು?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಕೆಡಿ ದಿ ಡೆವಿಲ್’ ಇಂದು ಭರ್ಜರಿಯಾಗಿ ತೆರೆ ಕಂಡಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ತಾರಾಬಳಗವೇ ಇದೆ. ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದು, ಇದರ ಹಿಂದೆ ಇರುವ ಕಾರಣಕ್ಕೂ ಚಿತ್ರದಲ್ಲಿ ಉತ್ತರ ಸಿಕ್ಕಿದೆ.

ಸಿನಿಮಾ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಧ್ರುವ ಸರ್ಜಾ ಅವರ ಅಭಿನಯಕ್ಕೆ ಫ್ಯಾನ್ಸ್ ಮನಸೋತಿದ್ದು, “ಫುಲ್ ಮಾರ್ಕ್ಸ್” ನೀಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಹಲವರು ಮೊದಲಾರ್ಧವನ್ನು “ಬೆಂಕಿ” ಎಂದು ಕರೆದಿದ್ದು, ಪ್ರತಿಯೊಂದು ಪಾತ್ರವೂ ಪ್ರಭಾವಶಾಲಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದ್ವಿತೀಯಾರ್ಧದಲ್ಲಿ ಮಾಸ್ ಕ್ಷಣಗಳು, ಬ್ಯಾಕ್‌ಗ್ರೌಂಡ್ ಸ್ಕೋರ್ ಮತ್ತು ಆಕ್ಷನ್ ಸೀಕ್ವೆನ್ಸ್‌ಗಳು ಹೈಲೈಟ್ ಆಗಿವೆ ಎಂದು ವೀಕ್ಷಕರು ಹೇಳಿದ್ದಾರೆ.

ಸಿನಿಮಾದಲ್ಲಿ ಧ್ರುವ ಅವರ ಡೀಸೆಂಟ್ ಎಂಟ್ರಿ, ಸಂಜಯ್ ದತ್ ಅವರ ಶಕ್ತಿಯುತ ಪ್ರಭಾವ ಮತ್ತು ಕಿಚ್ಚ ಸುದೀಪ್ ಅವರ ಮಾಸ್ ಪ್ರವೇಶ ಪ್ರೇಕ್ಷಕರನ್ನು ಆಕರ್ಷಿಸಿದೆ. ಹೀರೋಯಿನ್ ಪಾತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

70ರ ದಶಕದ ಕಥೆಯನ್ನು ರೆಟ್ರೋ ಶೈಲಿಯಲ್ಲಿ ಹೇಳಿರುವ ಈ ಚಿತ್ರ, ನಿರ್ಮಾಣ ಹಂತದಿಂದಲೇ ಹಲವು ವಿವಾದ, ಸೆನ್ಸಾರ್ ಸಮಸ್ಯೆಗಳನ್ನು ಎದುರಿಸಿದ ಬಳಿಕ ಇದೀಗ ತೆರೆಗೆ ಬಂದಿದೆ. ಮೊದಲ ದಿನವೇ ಬೆಂಗಳೂರಿನಲ್ಲಿ 320ಕ್ಕೂ ಹೆಚ್ಚು ಶೋಗಳಲ್ಲಿ ಪ್ರದರ್ಶನ ಕಂಡು ಭರ್ಜರಿ ಓಪನಿಂಗ್ ಪಡೆದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-30 13:05:18
No Reviews