ಬಾಲಯ್ಯ, ಶಾರುಖ್ ಬಳಿಕ ಜೈಲರ್ 2ಗೆ ಪವನ್ ಕಲ್ಯಾಣ್ ಟ್ವಿಸ್ಟ್

‘ಜೈಲರ್ 2’ಗೆ ಗೆಸ್ಟ್ ರೋಲ್ ಸಂಕಷ್ಟ: ಪವನ್ ಕಲ್ಯಾಣ್ ನೋ ಎಂದರೇನು?

ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಚಿತ್ರದಲ್ಲಿರುವ ಪ್ರಮುಖ ಅತಿಥಿ ಪಾತ್ರವೇ ಈಗ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಐದು ದಿನಗಳ ಚಿತ್ರೀಕರಣವಿರುವ ಈ ವಿಶೇಷ ಪಾತ್ರಕ್ಕಾಗಿ ಮೊದಲಿಗೆ ನಂದಮೂರಿ ಬಾಲಕೃಷ್ಣ ಅವರನ್ನು ಸಂಪರ್ಕಿಸಲಾಗಿತ್ತು. ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಎನ್ನಲಾಗಿದ್ದರೂ, ಅವರು ಆಫರ್ ಅನ್ನು ನಯವಾಗಿ ತಿರಸ್ಕರಿಸಿದರು.

ನಂತರ ಶಾರುಖ್ ಖಾನ್ ಅವರಿಗೆ ಆಹ್ವಾನ ನೀಡಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರ ಕಡೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ.

ಇದೀಗ ಆ ಪಾತ್ರದ ಆಫರ್ ಪವನ್ ಕಲ್ಯಾಣ್ ಅವರಿಗೆ ತಲುಪಿದ್ದರೂ, ರಾಜಕೀಯ ಕಾರ್ಯಭಾರ ಮತ್ತು ಒತ್ತಡದ ಕಾರಣದಿಂದ ಅವರು ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಆಂಧ್ರ ಪ್ರದೇಶ ಉಪಮುಖ್ಯಮಂತ್ರಿಯಾಗಿ ಬ್ಯುಸಿಯಾಗಿರುವ ಕಾರಣ ಅವರು ಈಗ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗುತ್ತಿದೆ.

ರಜನಿಕಾಂತ್ ಜೊತೆ ಬಾಲಕೃಷ್ಣ, ಶಾರುಖ್ ಖಾನ್ ಅಥವಾ ಪವನ್ ಕಲ್ಯಾಣ್ ಅವರನ್ನು ಒಂದೇ ಚಿತ್ರದಲ್ಲಿ ನೋಡುವ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಇದು ನಿರಾಶೆ ತಂದಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಎಸ್.ಜೆ. ಸೂರ್ಯ ಪ್ರಮುಖ ಖಳನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಆಗಸ್ಟ್ ಎರಡನೇ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-11 16:25:27
No Reviews