ಭಾರತದ ಸ್ಥೈರ್ಯಕ್ಕೆ ಅಮೆರಿಕ ಕೊಟ್ಟ ಒಪ್ಪಿಗೆ ಏನು?

ಈ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದ್ದೇ ಐರೋಪ್ಯ ಒಕ್ಕೂಟದ ಜತೆಗಿನ ‘ಮುಕ್ತ ವ್ಯಾಪಾರ ಒಪ್ಪಂದ’ (ಎಫ್‌ಟಿಎ). ಈ ಒಪ್ಪಂದ ಸಾಕಾರಗೊಳ್ಳುವ ಹಂತಕ್ಕೆ ಬಂದಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚೆತ್ತುಕೊಂಡು ತಮ್ಮ ಧೋರಣೆಯನ್ನೇ ಬದಲಿಸಿಕೊಂಡರು.

ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತವು ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಪರೋಕ್ಷವಾಗಿ ಆರ್ಥಿಕ ನೆರವು ನೀಡುತ್ತಿದೆ ಎಂಬ ಆರೋಪದ ನೆಪದಲ್ಲಿ ಟ್ರಂಪ್ ಅವರು ಭಾರತದ ಮೇಲೆ ಕೆಂಗಣ್ಣು ಬೀರಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇದಕ್ಕಷ್ಟೇ ಸೀಮಿತವಾಗದೇ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಹಲವು ಸರಕುಗಳ ಮೇಲೆ ಅತಿರೇಕದ ಸುಂಕವನ್ನು ಹೇರಿ ಐಲುಪೈಲು ಆಟವನ್ನೂ ಅವರು ಆಡಿದ್ದರು.

ಈ ರೀತಿಯ ಒತ್ತಡದಿಂದ ಭಾರತವು ಅಮೆರಿಕದ ಎದುರು ಮಣಿಯುತ್ತದೆ ಎಂಬುದೇ ಟ್ರಂಪ್ ಅವರ ಲೆಕ್ಕಾಚಾರವಾಗಿತ್ತು. ಆದರೆ ಆ ಲೆಕ್ಕಾಚಾರ ವಿಫಲವಾಯಿತು. ಭಾರತವು ಯಾವುದೇ ಆತುರವಿಲ್ಲದೇ ಪರ್ಯಾಯ ವಾಣಿಜ್ಯ ಮಾರ್ಗಗಳನ್ನು ಅನ್ವೇಷಿಸತೊಡಗಿದ್ದು, ಅದರ ಫಲವಾಗಿ ಐರೋಪ್ಯ ಒಕ್ಕೂಟದ ಜತೆಗಿನ ಎಫ್‌ಟಿಎಗೆ ಹೊಸ ಚೈತನ್ಯ ದೊರೆಯಿತು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಟ್ರಂಪ್, ತಕ್ಷಣವೇ ತಮ್ಮ ನಿಲುವಿನಲ್ಲಿ ಬದಲಾವಣೆ ತಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಹೊಸ ವ್ಯಾಪಾರ ಒಪ್ಪಂದ ಘೋಷಣೆಯೂ ನಡೆಯಿತು. ಜೊತೆಗೆ, ಭಾರತದ ಸರಕುಗಳ ಮೇಲೆ ಹೇರಿದ್ದ ಶೇ.25ರಷ್ಟು ಸುಂಕವನ್ನು ಶೇ.18ಕ್ಕೆ ಇಳಿಸಲಾಯಿತು. ಕ್ಷೇತ್ರತಜ್ಞರ ಅಭಿಪ್ರಾಯದಂತೆ, ಮುಂದಿನ ದಿನಗಳಲ್ಲಿ ಈ ಸುಂಕದ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯೂ ಇದೆ.

ಈ ಬೆಳವಣಿಗೆಯಿಂದ ‘ಮೂಗನ್ನು ಗಟ್ಟಿಯಾಗಿ ಹಿಡಿದರೆ, ಬಾಯಿ ತಾನಾಗೇ ತೆರೆದುಕೊಳ್ಳುತ್ತದೆ’ ಎಂಬ ಜಾಣನುಡಿಗೆ ಮತ್ತೊಮ್ಮೆ ಪುರಾವೆ ಸಿಕ್ಕಂತಾಗಿದೆ. ಅಮೆರಿಕದ ಈ ನಿರ್ಧಾರದಿಂದ ಭಾರತಕ್ಕೆ ಆರ್ಥಿಕವಾಗಿ ಮತ್ತು ರಾಜತಾಂತ್ರಿಕವಾಗಿ ಹಲವು ಪ್ರಯೋಜನಗಳು ದೊರೆಯಲಿವೆ ಎಂಬ ನಿರೀಕ್ಷೆಯಿದೆ.

ಆದರೆ, ಇದರಿಂದ ಭಾರತ ಮೈಮರೆಯುವಂತಿಲ್ಲ. ಹೇಳಿ ಕೇಳಿ ಐಲುಪೈಲು ದೊರೆ ಎನ್ನಿಸಿಕೊಂಡಿರುವ ಟ್ರಂಪ್ ಯಾವಾಗ ಬೇಕಾದರೂ ತಮ್ಮ ನಿಲುವನ್ನು ತಿರುವುಮಾಡುವ ಸಾಧ್ಯತೆ ಇದೆ. ಆದ್ದರಿಂದ ಭಾರತವು ಮುಂದೆಯೂ ಎಚ್ಚರಿಕೆಯಿಂದ, ಸಮತೋಲನದ ರಾಜತಂತ್ರವನ್ನು ಮುಂದುವರಿಸಬೇಕಾದ ಅಗತ್ಯವಿದೆ. ದೇಶದ ನಾಯಕತ್ವಕ್ಕೆ ಈ ವಾಸ್ತವ ಈಗಾಗಲೇ ಚೆನ್ನಾಗಿ ತಿಳಿದಿರುವುದೇ ಸತ್ಯ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-04 10:55:45
No Reviews