ಹುಬ್ಬಳ್ಳಿಯಲ್ಲಿ ಕರ್ನಾಟಕ–ಜಮ್ಮು ಕಾಶ್ಮೀರ ರಣಜಿ ಫೈನಲ್ ರಂಗು

ಲಖನೌದಲ್ಲಿ ಗುರುವಾರ ಮುಕ್ತಾಯಗೊಂಡ ಉತ್ತರಾಖಂಡ ವಿರುದ್ಧದ ಸೆಮಿಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ನ ಭರ್ಜರಿ ಮುನ್ನಡೆಯ ಬಲದಿಂದ ಕರ್ನಾಟಕ ಫೈನಲ್‌ಗೆ ದಾಪುಗಾಲಿಟ್ಟಿತು. ಮತ್ತೊಂದೆಡೆ, ಬಂಗಾಳವನ್ನು 6 ವಿಕೆಟ್‌ಗಳಿಂದ ಮಣಿಸಿದ ಜಮ್ಮು ಮತ್ತು ಕಾಶ್ಮೀರ ತಂಡ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.

ಕರ್ನಾಟಕಕ್ಕೆ ಇದು 15ನೇ ಫೈನಲ್ ಪ್ರವೇಶವಾಗಿದ್ದು, 2014-15ರ ಬಳಿಕ ಮೊದಲ ಸಾಧನೆ. ಗೆಲುವಿಗೆ 827 ರನ್ ಗುರಿ ಪಡೆದಿದ್ದ ಉತ್ತರಾಖಂಡ ತಂಡ, ನಾಯಕರು ಪಂದ್ಯವನ್ನು ಡ್ರಾಗೆ ಒಪ್ಪಿಕೊಂಡಾಗ 62 ಓವರ್‌ಗಳಲ್ಲಿ 6 ವಿಕೆಟ್‌ಗೆ 260 ರನ್ ಗಳಿಸಿತ್ತು. ಶ್ರೇಯಸ್ ಗೋಪಾಲ್ (3-83) ಹಾಗೂ ಪ್ರಸಿದ್ಧ ಕೃಷ್ಣ (2-17) ಪ್ರಮುಖವಾಗಿ ವಿಕೆಟ್ ಕಿತ್ತು ಮಿಂಚಿದರು.

ಒಂದು ಹಂತದಲ್ಲಿ 156/6 ಆಗಿದ್ದ ಉತ್ತರಾಖಂಡವನ್ನು, ಏಳನೇ ವಿಕೆಟ್‌ಗೆ 104 ರನ್‌ಗಳ ಅಜೇಯ ಜೊತೆಯಾಟದಿಂದ ಅಭಯ್ ನೇಗಿ (57*) ಮತ್ತು ಸೌರಭ್ ರಾವತ್ (53*) ಹೀನಾಯ ಸೋಲಿನಿಂದ ಪಾರು ಮಾಡಿದರು.

ಫೆ.24ರಿಂದ ಐದು ದಿನಗಳ ಕಾಲ ನಡೆಯಲಿರುವ ಕರ್ನಾಟಕ–ಜಮ್ಮು ಮತ್ತು ಕಾಶ್ಮೀರ ನಡುವಿನ ರಣಜಿ ಫೈನಲ್ ಪಂದ್ಯ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ದೇಶೀಯ, ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳ ಆಯೋಜನೆಗೆ ಷರತ್ತುಬದ್ಧ ಅನುಮೋದನೆ ದೊರೆತಿದ್ದರೂ, ರಣಜಿ ಫೈನಲ್‌ಗೆ ಹುಬ್ಬಳ್ಳಿಯನ್ನೇ ಆಯ್ಕೆ ಮಾಡುವುದಾಗಿ ಕೆಎಸ್‌ಸಿಎ ನಿರ್ಧರಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-20 10:56:34
No Reviews