ಲೋಕಾಯುಕ್ತ ತನಿಖೆ ಆರಂಭ: 15 ಲಕ್ಷಕ್ಕೂ ಅಧಿಕ ದುರುಪಯೋಗ ಶಂಕೆ

ಕಳೆದ ವರ್ಷವೂ ಭಕ್ತರ ದಂಡೇ ಹರಿದುಬಂದು ಇತಿಹಾಸ ನಿರ್ಮಾಣವಾಗಿತ್ತು. ಆದರೆ ಇದೀಗ ಉತ್ಸವದ ವೇಳೆ ನಡೆದ ವಿದ್ಯುತ್ ದೀಪಾಲಂಕಾರ ಟೆಂಡರ್‌ನಲ್ಲಿ ಗಂಭೀರ ಅವ್ಯವಹಾರ ಆರೋಪ ಕೇಳಿಬಂದಿದೆ.

ಆರ್‌ಟಿಐ ಕಾರ್ಯಕರ್ತ ಮನು ಸಲ್ಲಿಸಿದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಮುಜರಾಯಿ ಇಲಾಖೆಯ ಗ್ರೇಡ್–ಒನ್ ದೇವಾಲಯದಲ್ಲಿ ಪ್ರತಿ ವರ್ಷ ಒಂದೇ ಗುತ್ತಿಗೆದಾರನಿಗೆ ಟೆಂಡರ್ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಹಲವಾರು ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದರೂ, ನಿಯಮಗಳನ್ನು ಪಾಲಿಸದೆ ಒಬ್ಬರಿಗೇ ಅವಕಾಶ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯುತ್ ದೀಪಾಲಂಕಾರ ಕಾರ್ಯದಲ್ಲಿ ಮಾತ್ರವೇ 15 ಲಕ್ಷಕ್ಕೂ ಅಧಿಕ ಹಣ ದುರುಪಯೋಗವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. “ಅನುಭವ ಹೊಂದಿದವರಿಗೆ ಮಾತ್ರ ಆದ್ಯತೆ” ಎಂಬ ನಿಯಮವನ್ನು ಸೇರಿಸಿ ಲೈಟಿಂಗ್, ಹೂವಿನ ಅಲಂಕಾರ ಸೇರಿದಂತೆ ಬಹುತೇಕ ಎಲ್ಲಾ ಕೆಲಸಗಳನ್ನು ಒಂದೇ ಗುತ್ತಿಗೆದಾರನಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಖರೀದಿ ವೆಚ್ಚಕ್ಕಿಂತ ಹೆಚ್ಚು ಮೊತ್ತವನ್ನು ಬಿಲ್ ಮಾಡಲಾಗಿದೆ ಎಂಬುದೂ ದೂರಿನಲ್ಲಿದೆ.

ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿ ಗಾಯತ್ರಿ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ದೂರುದಾರ ಮನು, ಪಾಲಿಕೆ ಇಂಜಿನಿಯರ್ ಸುಜಾತಾ ಹಾಗೂ ನಿವೃತ್ತ ಇಂಜಿನಿಯರ್ ರಂಗಸ್ವಾಮಿ ಅವರನ್ನು ಪ್ರಶ್ನಿಸಲಾಯಿತು. ಸರಿಯಾದ ದಾಖಲೆಗಳನ್ನು ಒದಗಿಸದಿರುವ ಬಗ್ಗೆ ತನಿಖಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿ, ಅಗತ್ಯ ದಾಖಲೆ ಸಲ್ಲಿಸದಿದ್ದರೆ ವರದಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭಕ್ತರ ಹಣವನ್ನು ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪ ಗಂಭೀರವಾಗಿದ್ದು, ತನಿಖೆಯ ಅಂತಿಮ ವರದಿ ನಂತರವೇ ನಿಜಾಂಶ ಬಹಿರಂಗವಾಗಲಿದೆ. ಹಾಸನಾಂಬೆ ಉತ್ಸವದಂತಹ ಭಕ್ತಿಭಾವದ ಕಾರ್ಯಕ್ರಮದಲ್ಲಿ ಹಣಕಾಸು ಪಾರದರ್ಶಕತೆ ಕಾಪಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-20 18:14:06
No Reviews