ಹಂಪಿ ಉತ್ಸವ ಆರಂಭ: ಮೂರು ದಿನ ಕಲಾ–ಚಿತ್ರರಂಗದ ಸಂಭ್ರಮ

ಕಲೆ, ಸಾಹಿತ್ಯ, ಸಂಗೀತಗಳ ಸಂಗಮವಾಗಿದ್ದ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸ್ಮರಿಸುವ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಜತನದಿಂದ ಒಪ್ಪಿಸುವ ಮಹದಾಶಯದೊಂದಿಗೆ ನಡೆಯುತ್ತಿರುವ Hampi ಉತ್ಸವಕ್ಕೆ ಲಕ್ಷಾಂತರ ಜನರು ಹರಿದುಬರಲಿದ್ದಾರೆ ಎಂಬ ನಿರೀಕ್ಷೆ ಇದೆ. ಉತ್ಸವದ ಯಶಸ್ಸಿಗಾಗಿ ವಿಜಯನಗರ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದು, ಹಂಪಿಯ ಪರಿಸರದಲ್ಲಿ ಈಗ ಕಲೆ, ಸಾಹಿತ್ಯ ಮತ್ತು ಸಂಭ್ರಮದ ಸುವಾಸನೆ ಹರಡಿದೆ.

ಆರು ವೇದಿಕೆಗಳ ವೈಭವ

ಉತ್ಸವಕ್ಕಾಗಿ ಆರು ಭವ್ಯ ವೇದಿಕೆಗಳನ್ನು ನಿರ್ಮಿಸಲಾಗಿದೆ. ಮುಖ್ಯ ವೇದಿಕೆಗೆ ಹಂಪಿ ಉತ್ಸವದ ರೂವಾರಿ ದಿ. ಎಂ.ಪಿ. ಪ್ರಕಾಶ್ ವೇದಿಕೆ ಎಂದು ನಾಮಕರಣ ಮಾಡಲಾಗಿದ್ದು, ಬಸವಣ್ಣ ಸಮೀಪ ಶ್ರೀಕೃಷ್ಣದೇವರಾಯ ವೇದಿಕೆ, ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ವಿರೂಪಾಕ್ಷೇಶ್ವರ ವೇದಿಕೆ, ಸಾಸಿವೆಕಾಳು ಗಣಪ ವೇದಿಕೆ, ಮಹಾನವಮಿ ದಿಬ್ಬದ ಬಳಿ ವಿದ್ಯಾರಣ್ಯ ವೇದಿಕೆ ಹಾಗೂ ಆನೆಲಾಯ ಸಮೀಪ ಹಕ್ಕಬುಕ್ಕ ವೇದಿಕೆಗಳು ಸಜ್ಜಾಗಿವೆ. ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಸಾಹಿತ್ಯ ಗೋಷ್ಠಿಗಳು ನಡೆಯಲಿದ್ದು, ಉಳಿದ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.

ಸಂಭ್ರಮದ ಮೇಳ

ಉತ್ಸವದ ಅಂಗವಾಗಿ ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ತುಂಗಾ ಆರತಿ, ಬೈಕ್ ರ್ಯಾಲಿ ಈಗಾಗಲೇ ಗಮನ ಸೆಳೆದಿವೆ. ಕಾಶಿ ಗಂಗಾರತಿ ಮಾದರಿಯಲ್ಲಿ ನೆರವೇರಿದ ತುಂಗಾರತಿ ಹಂಪಿಗೆ ಹೊಸ ಕಂಗೊಳನ್ನು ನೀಡಿದೆ. ಗಾಳಿಪಟ ಪ್ರದರ್ಶನ, ಎತ್ತುಗಳ ಪ್ರದರ್ಶನ, ಆಹಾರಮೇಳ, ಗ್ರಾಮೀಣ ಕ್ರೀಡೆಗಳು, ಬೋಟಿಂಗ್, ಫಲಪುಷ್ಪ ಪ್ರದರ್ಶನ, ಡ್ರೋನ್ ಪ್ರದರ್ಶನ, ವಿಜಯನಗರ ವೈಭವದ ಧ್ವನಿ–ಬೆಳಕು ಕಾರ್ಯಕ್ರಮಗಳು ಉತ್ಸವದ ವಿಶೇಷ ಆಕರ್ಷಣೆಯಾಗಿವೆ.

ಸಂಚಾರ ಮತ್ತು ಸೌಲಭ್ಯ

ಉತ್ಸವಕ್ಕೆ ಆಗಮಿಸುವ ವಾಹನಗಳಿಗಾಗಿ 120 ಎಕರೆ ಪ್ರದೇಶದಲ್ಲಿ ಏಳು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಿಂದ 168 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಹೊಸಪೇಟೆಯಿಂದ ಹಂಪಿಗೆ 50 ಉಚಿತ ಬಸ್‌ಗಳು ಸಂಚರಿಸುತ್ತಿವೆ.

ಚಿತ್ರನಟರ ದಂಡು

ಉತ್ಸವದ ಮೊದಲ ದಿನದ ಉದ್ಘಾಟನಾ ಸಮಾರಂಭದಲ್ಲಿ Shivarajkumar, Ashwini Puneeth Rajkumar, Rukmini Vasanth ಭಾಗವಹಿಸಲಿದ್ದಾರೆ. ವಿಜಯಪ್ರಕಾಶ್ ಹಾಗೂ ಹರಿಹರನ್ ತಂಡಗಳ ಸಂಗೀತ ಕಾರ್ಯಕ್ರಮಗಳು ರಸಮಂಜರಿಯಾಗಲಿವೆ.
ಫೆ.14ರಂದು ಗೋಲ್ಡನ್ ಸ್ಟಾರ್ ಗಣೇಶ್, ರಾಜ್ ಬಿ. ಶೆಟ್ಟಿ, ಸಪ್ತಮಿ ಗೌಡ, ಝೈದ್ ಖಾನ್ ಸೇರಿದಂತೆ ಹಲವರು ಭಾಗವಹಿಸಲಿದ್ದು, ಅರ್ಜುನ್ ಜನ್ಯ ಮತ್ತು ನವೀನ್ ಸಜ್ಜು ತಂಡಗಳು ವೇದಿಕೆ ತುಂಬಿಸಲಿವೆ.
ಫೆ.15ರಂದು ಡಾಲಿ ಧನಂಜಯ, ರಚಿತಾರಾಮ್, ಧ್ರುವ ಸರ್ಜಾ ಉಪಸ್ಥಿತಿಯಲ್ಲಿ ರಘು ದೀಕ್ಷಿತ್, ಮಂಗಲಿ, ಮಣಿಕಾಂತ್ ಕದ್ರಿ ತಂಡಗಳ ಸಂಗೀತ ಸಂಭ್ರಮ ನಡೆಯಲಿದೆ.

ಝಗಮಗಿಸುವ ಹಂಪಿ

ಉತ್ಸವದ ಹಿನ್ನೆಲೆಯಲ್ಲಿ ಹಂಪಿಯ ಪರಿಸರ ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದು, ವೇದಿಕೆಗಳ ಮುಂಭಾಗದಿಂದ ಬೀದಿಬೀದಿಗಳವರೆಗೆ ಬೆಳಕಿನ ಹಬ್ಬದ ವಾತಾವರಣ ಸೃಷ್ಟಿಯಾಗಿದೆ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-13 12:30:36
No Reviews