ಶಿವಣ್ಣ ಕಾಲುಧೂಳಿಗೂ ನಾನು ಸಮ ಅಲ್ಲ ಎಂದ ಗಿಲ್ಲಿ ನಟ


ನಿನ್ನೆಯ ಸಂಚಿಕೆಯಲ್ಲಿ ಬಿಗ್‌ ಬಾಸ್‌ ನೀಡಿದ ವಿಶೇಷ ಚಟುವಟಿಕೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಸಂತೋಷ–ದುಃಖಗಳನ್ನು ಮನಮುಟ್ಟುವಂತೆ ಹಂಚಿಕೊಂಡರು. ಈ ವೇಳೆ ಮಾತನಾಡಿದ ಗಿಲ್ಲಿ ನಟ, ತಮ್ಮ ಜೀವನದ ಕಠಿಣ ಹೋರಾಟಗಳನ್ನು ತೆರೆದಿಟ್ಟರು. ಹಳ್ಳಿಯಿಂದ ಬೆಂಗಳೂರಿಗೆ ಬಂದಾಗ ಎದುರಿಸಿದ ಸಂಕಷ್ಟಗಳು, ನಿರ್ದೇಶಕನಾಗಬೇಕೆಂಬ ಕನಸು ಮತ್ತು ಬದುಕುಳಿಯಲು ನಡೆಸಿದ ಹೋರಾಟವನ್ನು ಭಾವುಕವಾಗಿ ವಿವರಿಸಿದರು.
“ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ಊಟಕ್ಕೂ, ಇರೋಕೆ ಜಾಗಕ್ಕೂ ಪರದಾಟವಿತ್ತು. ಹತ್ತು ದಿನ ಪಾರ್ಕ್‌ನಲ್ಲೇ ಉಳಿದಿದ್ದೆ. ಹಣ ಕೈಯಲ್ಲಿ ಇರಲಿಲ್ಲ, ಬಾಡಿಗೆ ಕಟ್ಟಲು ಕೂಡ ಸಾಧ್ಯವಾಗಿರಲಿಲ್ಲ” ಎಂದು ಗಿಲ್ಲಿ ನೆನಪು ಹಂಚಿಕೊಂಡರು. ಇನ್ನೂ, “ಒಮ್ಮೆ ಪಕ್ಕದ ರೂಮಿನಲ್ಲಿ ಅನ್ನ ಕದ್ದು ತಿಂದ ದಿನಗಳೂ ಇವೆ. ಜೀವನ ಹೀಗೆ ಏಕೆ ಅನ್ನಿಸಿತ್ತು” ಎಂದು ಅವರ ಮಾತುಗಳು ಎಲ್ಲರ ಮನ ತಟ್ಟಿದವು.
ಕೊರೊನಾ ಸಮಯದಲ್ಲಿ ಯೂಟ್ಯೂಬ್‌ ಚಾನೆಲ್ ಆರಂಭಿಸಿದ್ದು, ಅಲ್ಲಿಂದಲೇ ಬದುಕಿಗೆ ಹೊಸ ತಿರುವು ಸಿಕ್ಕಿತು ಎಂದು ಗಿಲ್ಲಿ ಹೇಳಿದರು. ಈ ಸಂದರ್ಭ ನಟ ಶಿವರಾಜ್‌ಕುಮಾರ್ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸಿದ ಅವರು, “ಒಂದು ಕಾರ್ಯಕ್ರಮದಲ್ಲಿ ಶಿವಣ್ಣ ‘ನಿನ್ನ ಅಭಿಮಾನಿ’ ಎಂದಾಗ, ಅದು ನನಗೆ ದೊಡ್ಡ ಅವಾರ್ಡ್ ಸಿಕ್ಕಷ್ಟೇ ಖುಷಿ ಕೊಟ್ಟಿತು. ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮನಲ್ಲ” ಎಂದು ವಿನಮ್ರವಾಗಿ ಹೇಳಿದರು.
ಬಿಗ್‌ ಬಾಸ್‌ ಪ್ರವೇಶದ ಬಳಿಕ ತನ್ನ ಜೀವನವೇ ಬದಲಾಗಿದೆ ಎಂದ ಗಿಲ್ಲಿ, ಅಭಿಮಾನಿಗಳ ಪ್ರೀತಿ, ಟ್ಯಾಟೂ ಹಾಕಿಸಿಕೊಂಡಿರುವ ಫ್ಯಾನ್ಸ್‌, ಕನ್ನಡಿಯಲ್ಲಿ ಮುಖ ನೋಡಿದಾಗ ಬರುವ ನಗು ಮತ್ತು ಅಪ್ಪ–ಅಮ್ಮ ಇಲ್ಲಿವರೆಗೆ ಬಂದಿರುವುದೇ ತನ್ನ ಅತಿದೊಡ್ಡ ಸಾಧನೆ ಎಂದು ಭಾವುಕವಾಗಿ ಹೇಳಿದರು
ಇನ್ನು ಶಿವರಾಜ್‌ಕುಮಾರ್ ಕೂಡ ಗಿಲ್ಲಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಗಿಲ್ಲಿಯ ಪರಿಚಯವಾದ ಬಳಿಕ, ಅವರ ಮನರಂಜನೆ ಹಾಗೂ ಸಿಗ್ನೇಚರ್ ಸ್ಟೆಪ್ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಶಿವಣ್ಣ, “ಗಿಲ್ಲಿಯೇ ಬಿಗ್‌ ಬಾಸ್‌ ಗೆಲ್ಲೋದು” ಎಂದು ಟೇಬಲ್ ತಟ್ಟಿ ಹೇಳಿ, ಆಲ್‌ ದಿ ಬೆಸ್ಟ್‌ ಕೋರಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-17 13:51:52
No Reviews