ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಗಿಲ್ಲಿ ನಟ

ದೇಶ ಕಾಯುವ ಯೋಧರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಎಲ್ಲರೂ ನೀಡಿದ ಪ್ರೀತಿ ಮತ್ತು ಬೆಂಬಲ ನನಗೆ ಅಪಾರ ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಗಿಲ್ಲಿ ನಟ, “ನಮ್ಮ ಕನ್ನಡಿಗರಿಗೆ, ನಮ್ಮ ಕನ್ನಡ ಜನತೆಗೆ ಯಾವ ರೀತಿಯಲ್ಲಿ ಕೃತಜ್ಞತೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ನಾನು ಬಿಗ್‌ಬಾಸ್ ಮನೆಯೊಳಗಿದ್ದಾಗ ಹೊರಗಡೆ ನನಗೆ ಇಷ್ಟೊಂದು ಬೆಂಬಲ ಸಿಗುತ್ತಿದೆ ಎಂಬುದನ್ನು ಕನಸಲ್ಲಿಯೂ ಊಹಿಸಿರಲಿಲ್ಲ. ಹೊರಗೆ ಬಂದ ಮೇಲೆ ಇದನ್ನೆಲ್ಲಾ ನೋಡಿ ನಿಜಕ್ಕೂ ಅಚ್ಚರಿ ಮತ್ತು ಖುಷಿಯಾಗಿದೆ” ಎಂದು ಭಾವನೆ ಹಂಚಿಕೊಂಡಿದ್ದಾರೆ.

ದೇಶ ಕಾಯುವ ಯೋಧರು ವಿಡಿಯೋ ಮಾಡಿ ಆಶೀರ್ವಾದ ಕೋರಿರುವುದು, ತಮಿಳುನಾಡು, ಆಂಧ್ರ ಸೇರಿದಂತೆ ಬೇರೆ ರಾಜ್ಯಗಳವರು ಹಾಗೂ ವಿದೇಶದಲ್ಲಿರುವ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿರುವುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರೈತರು ಹಸುಗಳ ಮೇಲೆ ಚಿತ್ರ ಬಿಡಿಸಿ ಫೋಟೋ ಹಂಚಿಕೊಂಡದ್ದು, ಆಟೋ ಚಾಲಕರು ಸ್ಟಿಕ್ಕರ್ ಅಂಟಿಸಿದ್ದು, ಯಾರೂ ಪರಿಚಯವಿಲ್ಲದ ಕೆಲವರು ಟ್ಯಾಟೂ ಹಾಕಿಸಿಕೊಂಡು ಪ್ರೀತಿ ತೋರಿಸಿದ್ದು ನನಗೆ ತುಂಬಾ ಸ್ಪರ್ಶಿಸಿದೆ ಎಂದು ಹೇಳಿದ್ದಾರೆ.

“ಒಬ್ಬರು-ಇಬ್ಬರು ಅಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ನೀಡಿದ ಪ್ರೀತಿ, ಪ್ರೋತ್ಸಾಹ ನನ್ನ ಶಕ್ತಿ. ಎಲ್ಲ ಮೀಡಿಯಾಗಳೂ ನನಗೆ ಅಪಾರ ಬೆಂಬಲ ನೀಡಿವೆ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಅಥವಾ ಟ್ರೋಲ್ ವಿಡಿಯೋ ಕೂಡ ನೋಡಿಲ್ಲ. ನಿಮ್ಮ ಈ ಪ್ರೀತಿ ಹೀಗೆಯೇ ಇರಲಿ, ನಾನು ಅದನ್ನು ಕೊನೆವರೆಗೂ ಉಳಿಸಿಕೊಂಡು ಹೋಗುತ್ತೇನೆ” ಎಂದು ಗಿಲ್ಲಿ ನಟ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-22 13:30:25
No Reviews