GAFX Bengaluru 2026 ಉದ್ಘಾಟನೆ: AVGC-XR ಕ್ರಾಂತಿಯಲ್ಲಿ ಮುಂಚೂಣಿಗೆ ರಾಜ್ಯ

ಕರ್ನಾಟಕವನ್ನು ಭಾರತದ ‘ಸಿಲಿಕಾನ್ ವ್ಯಾಲಿ’ಯಷ್ಟೇ ಅಲ್ಲ, ಡಿಜಿಟಲ್ ಪ್ರಪಂಚದ ‘ಸೃಜನಶೀಲ ರಾಜಧಾನಿ’ಯಾಗಿ ರೂಪಿಸುವ ಕನಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಬೆಂಗಳೂರುನಲ್ಲಿ ನಡೆದ GAFX Bengaluru 2026ರ 7ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, “ಎವಲ್ಯೂಷನ್ ರೀಲೋಡ್” ಎಂಬ ಥೀಮ್‌ ಮೂಲಕ ಗೇಮ್ಸ್, ಅನಿಮೇಶನ್ ಮತ್ತು ವಿಸುವಲ್ ಎಫೆಕ್ಟ್ಸ್ ಕ್ಷೇತ್ರದಲ್ಲಿ ಕರ್ನಾಟಕದ ದಿಟ್ಟ ಹೆಜ್ಜೆಯನ್ನು ಜಗತ್ತಿಗೆ ಪರಿಚಯಿಸಿದ್ದೇವೆ” ಎಂದರು.

ಬೆಂಗಳೂರು ಕೇವಲ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲ; ಇಲ್ಲಿ ಕಲ್ಪನೆ ಮತ್ತು ಎಂಜಿನಿಯರಿಂಗ್, ಕಲೆ ಮತ್ತು ಅಲ್ಗಾರಿದಮ್‌ಗಳ ಸಂಗಮವಿದೆ ಎಂದು ಸಿಎಂ ಹೇಳಿದರು. ಡಿಜಿಟಲ್ ಕ್ರಾಂತಿ, ಇಮರ್ಸಿವ್ ಮೀಡಿಯಾ, ಸ್ಟ್ರೀಮಿಂಗ್ ವೇದಿಕೆಗಳು, ಇ-ಸ್ಪೋರ್ಟ್ಸ್ ಹಾಗೂ ಎಕ್ಸ್ಟೆಂಡೆಡ್ ರಿಯಾಲಿಟಿ ಯುಗದಲ್ಲಿ GAFX ಕ್ಷೇತ್ರವು ಸೃಜನಶೀಲ ಉದ್ಯಮದಿಂದ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದು ಅವರು ವಿವರಿಸಿದರು.

2017ರಲ್ಲಿ ದೇಶದಲ್ಲೇ ಮೊದಲ ಬಾರಿಗೆ AVGC ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕವೇ ಎಂಬುದನ್ನು ಸ್ಮರಿಸಿದ ಸಿಎಂ, 2024–2029ರ ಮೂರನೇ AVGC-XR ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಘೋಷಿಸಿದರು. K-Tech, ಸ್ಟಾರ್ಟ್ಅಪ್ ಕರ್ನಾಟಕ, ಶ್ರೇಷ್ಠತಾ ಕೇಂದ್ರಗಳು ಮತ್ತು ಉದ್ಯಮಗಳ ಸಹಭಾಗಿತ್ವದ ಮೂಲಕ ರಾಜ್ಯವು ನೀತಿಗಳನ್ನು ಮಾತ್ರವಲ್ಲ, ಬೆಳವಣಿಗೆಗೆ ಸಮಗ್ರ ವೇದಿಕೆಯನ್ನು ನಿರ್ಮಿಸಿದೆ ಎಂದರು.
 

ಮುಂದಿನ ಐದು ವರ್ಷಗಳಲ್ಲಿ AVGC-XR ಕ್ಷೇತ್ರವು ಸುಮಾರು 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದರು. ವಿನ್ಯಾಸ, ಕೋಡಿಂಗ್, ಕಥನ, ಸಂಗೀತ, ಮೋಷನ್ ಕ್ಯಾಪ್ಚರ್, AI ಮಾಡೆಲಿಂಗ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ಅವಕಾಶಗಳು ವಿಸ್ತರಿಸುತ್ತಿವೆ.

ರಾಜ್ಯದ ದೃಷ್ಟಿಕೋನ ಐದು ಮುಖ್ಯ ಆದ್ಯತೆಗಳ ಮೇಲೆ ನಿಂತಿದೆ:

1. ಪ್ರತಿಭೆಗೆ ತರಬೇತಿ: ಶಾಲೆ-ಕಾಲೇಜು ಹಂತದಲ್ಲೇ ಉದ್ಯಮಕ್ಕೆ ಅಗತ್ಯವಾದ ಕೌಶಲ್ಯಗಳ ಅಭ್ಯಾಸ.
2. ಮೂಲಸೌಕರ್ಯ ವೃದ್ಧಿ: ಸ್ಟುಡಿಯೋಗಳು, ಲ್ಯಾಬ್‌ಗಳು, ಮೋಷನ್ ಕ್ಯಾಪ್ಚರ್ ಸೌಲಭ್ಯಗಳು ಮತ್ತು ಇನ್ಕ್ಯುಬೇಶನ್ ಕೇಂದ್ರಗಳು.
3. ಸ್ಟಾರ್ಟಪ್ ಬೆಂಬಲ: ಕರ್ನಾಟಕದ ಮಣ್ಣಿನಿಂದ ಹುಟ್ಟಿದ ಕಥೆಗಳು ಮತ್ತು ಪಾತ್ರಗಳು ಜಗತ್ತಿನ ಮಟ್ಟಿಗೆ ಬೆಳೆಯುವಂತೆ ಪ್ರೋತ್ಸಾಹ.
4. ಬೆಂಗಳೂರಿನಾಚೆಗೆ ವಿಸ್ತರಣೆ: ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಡಿಜಿಟಲ್ ಕ್ರಿಯೇಟಿವ್ ಕ್ಲಸ್ಟರ್‌ಗಳ ನಿರ್ಮಾಣ.
5. ಜಾಗತಿಕ ಸಂಪರ್ಕ: ಅಂತಾರಾಷ್ಟ್ರೀಯ ಸ್ಟುಡಿಯೋಗಳು, ಹೂಡಿಕೆದಾರರು ಮತ್ತು ಶಿಕ್ಷಣ ಸಂಸ್ಥೆಗಳ ಜೊತೆ ಸಹಕಾರ.

AI ಕುರಿತು ಮಾತನಾಡಿದ ಸಿಎಂ, “AI ಕೇವಲ ಸಾಧನ. ಅದು ಮನುಷ್ಯನ ಭಾವನೆ, ಕಲ್ಪನೆ ಮತ್ತು ಕಥನಶಕ್ತಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ತಂತ್ರಜ್ಞಾನ ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸಬೇಕು; ಅಳಿಸಬಾರದು” ಎಂದು ಸ್ಪಷ್ಟಪಡಿಸಿದರು. ಬೌದ್ಧಿಕ ಆಸ್ತಿ ಹಕ್ಕುಗಳು, ದತ್ತಾಂಶ ಗೌಪ್ಯತೆ ಮತ್ತು ನ್ಯಾಯಸಮ್ಮತ ಸಂಭಾವನೆಗಳ ಬಗ್ಗೆ ಎಚ್ಚರಿಕೆ ಅಗತ್ಯವೆಂದರು.

ಅಭಿವೃದ್ಧಿ ಎಲ್ಲರಿಗೂ ತಲುಪಬೇಕು; ಡಿಜಿಟಲ್ ಕ್ರಾಂತಿ ಶ್ರೀಮಂತ-ಬಡ ಅಂತರವನ್ನು ಹೆಚ್ಚಿಸಬಾರದು ಎಂದು ಸಿಎಂ ಹೇಳಿದರು. ಕೃಷಿಯಿಂದ ಕೈಗಾರಿಕೆ, ಐಟಿ ಕ್ರಾಂತಿಯಿಂದ ಬಯೋಟೆಕ್ ವಿಸ್ತರಣೆವರೆಗೆ ಬದಲಾವಣೆಯನ್ನು ಧೈರ್ಯವಾಗಿ ಸ್ವೀಕರಿಸಿರುವ ಕರ್ನಾಟಕ, ಈಗ AVGC-XR ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರಲು ಸಜ್ಜಾಗಿದೆ.

ಕರ್ನಾಟಕದ ಯುವಕರು ಉದ್ಯೋಗಾಕಾಂಕ್ಷಿಗಳಲ್ಲ, ಅವರು ಭವಿಷ್ಯದ ವರ್ಚುವಲ್ ಮತ್ತು ಸಂವಾದಾತ್ಮಕ ಜಗತ್ತಿನ ಸೃಷ್ಟಿಕರ್ತರು ಎಂಬ ಸಂದೇಶದೊಂದಿಗೆ GAFX Bengaluru 2026 ಹೊಸ ಉತ್ಸಾಹಕ್ಕೆ ನಾಂದಿ ಹಾಡಿತು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-27 16:35:50
No Reviews