51 ಸಾವಿರ ಉದ್ಯೋಗ ಪತ್ರ ವಿತರಿಸಿದ ಮೋದಿ: ‘5 ರಾಷ್ಟ್ರಗಳ ಪ್ರವಾಸ ಭಾರತಕ್ಕೆ ಲಾಭ’

ನವದೆಹಲಿ, ಮೇ 23: ಪ್ರಧಾನಿ Narendra Modi ಅವರು ದೇಶದಾದ್ಯಂತ 51 ಸಾವಿರಕ್ಕೂ ಹೆಚ್ಚು ಯುವಕರಿಗೆ ರೈಲ್ವೆ, ಬ್ಯಾಂಕಿಂಗ್, ರಕ್ಷಣಾ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದರು. ಈ ವೇಳೆ ತಮ್ಮ ಇತ್ತೀಚಿನ ಐದು ರಾಷ್ಟ್ರಗಳ ಪ್ರವಾಸದ ಕುರಿತು ಟೀಕೆ ಮಾಡಿದ ವಿರೋಧಿಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

“ನಾನು ಕೇವಲ ಐದು ದೇಶಗಳಿಗೆ ಭೇಟಿ ನೀಡಿ ಬಂದಿಲ್ಲ. ಆ ಪ್ರವಾಸದ ಅವಧಿಯಲ್ಲಿ ಜಗತ್ತಿನ ಹಲವು ಪ್ರಮುಖ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇನೆ. ಭಾರತದ ಯುವಶಕ್ತಿ, ತಾಂತ್ರಿಕ ಸಾಮರ್ಥ್ಯ ಮತ್ತು ಪ್ರತಿಭೆಗೆ ಇಂದು ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ,” ಎಂದು ಪ್ರಧಾನಿ ಹೇಳಿದರು. ಭಾರತೀಯ ಯುವಕರಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳು ದೊರಕಬೇಕು ಎಂಬುದೇ ತಮ್ಮ ವಿದೇಶಿ ಭೇಟಿಗಳ ಪ್ರಮುಖ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.

ಭಾರತವು ವಿಶ್ವದ ಅತ್ಯಂತ ವಿಶ್ವಾಸಾರ್ಹ ‘ಸಪ್ಲೈ ಚೈನ್’ ಕೇಂದ್ರವಾಗಿ ಬೆಳೆಯುತ್ತಿದೆ ಎಂದ ಮೋದಿ, ವಿವಿಧ ರಾಷ್ಟ್ರಗಳೊಂದಿಗೆ ನಡೆದ ಪ್ರಮುಖ ಒಪ್ಪಂದಗಳನ್ನೂ ಉಲ್ಲೇಖಿಸಿದರು.
ನೆದರ್‌ಲ್ಯಾಂಡ್ಸ್‌ನ ಖ್ಯಾತ ಸೆಮಿಕಂಡಕ್ಟರ್ ಸಂಸ್ಥೆ ASML, ಭಾರತದ Tata Group ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ಇದಲ್ಲದೆ, ಸ್ವೀಡನ್ ಮತ್ತು ಇಟಲಿಯೊಂದಿಗೆ ಹಸಿರು ಇಂಧನ, AI, ಡಿಜಿಟಲ್ ನವೀನತೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲಾಗಿದ್ದು, ಯುಎಇ ಮತ್ತು ನಾರ್ವೆಯೊಂದಿಗೆ ಹಡಗು ನಿರ್ಮಾಣ, ಸೂಪರ್‌ಕಂಪ್ಯೂಟಿಂಗ್ ಹಾಗೂ ಹಸಿರು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳಿಗೆ ಒಪ್ಪಂದಗಳಾಗಿವೆ ಎಂದು ತಿಳಿಸಿದರು.

ನೇಮಕಾತಿ ಪತ್ರ ಪಡೆದ ಯುವಕರನ್ನು ಅಭಿನಂದಿಸಿದ ಪ್ರಧಾನಿ, “ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು. ನೀವು ದೇಶದ ಅಭಿವೃದ್ಧಿ ಯಾತ್ರೆಯ ಪ್ರಮುಖ ಪಾಲುದಾರರು,” ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹಸಿರು ಹೈಡ್ರೋಜನ್, ಶುದ್ಧ ಇಂಧನ ಹಾಗೂ ಸುಸ್ಥಿರ ಉತ್ಪಾದನಾ ಕ್ಷೇತ್ರಗಳಲ್ಲಿ ಅಪಾರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-23 13:22:07
No Reviews