ಶ್ರವಣ ಸಾಧನ ವಿತರಣೆ ಮಾನವೀಯ ಕಾರ್ಯ: ಡಾ. ಸುಧಾಕರ್

ಚಿಕ್ಕಬಳ್ಳಾಪುರದಲ್ಲಿ ಮಾನವೀಯತೆಗೆ ಮೆರಗು ತಂದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್‌ನ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ “ಮಕ್ಕಳ ಉಚಿತ ಶ್ರವಣ ದೋಷ ತಪಾಸಣೆ ಮತ್ತು ಶ್ರವಣ ಸಾಧನಗಳ ವಿತರಣಾ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಕ್ಕಳ ಜನನ ಸಮಯದಲ್ಲಿ ಎಲ್ಲ ದೈಹಿಕ ಅಥವಾ ಮಾನಸಿಕ ದೋಷಗಳು ತಕ್ಷಣ ಕಾಣಿಸಿಕೊಳ್ಳದೇ ಇರಬಹುದು; ಆದರೆ ಬೆಳವಣಿಗೆಯ ಹಂತದಲ್ಲಿ ಶ್ರವಣ, ದೃಷ್ಟಿ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಬಹುದೆಂದು ತಿಳಿಸಿದರು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ (ಆರ್‌ಬಿಎಸ್‌ಕೆ) ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ವರ್ಷಕ್ಕೆ ನಾಲ್ಕು ಬಾರಿ ಮತ್ತು ಶಾಲಾ ಮಕ್ಕಳಿಗೆ ಎರಡು ಬಾರಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಶ್ರವಣ ದೋಷವುಳ್ಳವರಿಗೆ ಶ್ರವಣ ಸಾಧನ, ದೃಷ್ಟಿ ಸಮಸ್ಯೆಯವರಿಗೆ ಕನ್ನಡಕ ಹಾಗೂ ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಒದಗಿಸುವ ಕಾರ್ಯವನ್ನು ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದರು. ಈ ಮಹತ್ವದ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ರೋಟರಿ ಸಂಸ್ಥೆ, ರಾಜ್ ಮಹಲ್ ವಿಲಾಸ್, ಮಾವಟೆ, ಸಂವಾದ್ ಫೌಂಡೇಷನ್ ಮತ್ತು ಇಂಡಿಯಾ ಎನ್‌ಜಿಒಗಳಿಗೆ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ಇಂದು ವಿತರಿಸಲಾದ ಶ್ರವಣ ಸಾಧನಗಳನ್ನು 111 ಮಕ್ಕಳು ಸಮರ್ಪಕವಾಗಿ ಬಳಸಿಕೊಳ್ಳಬೇಕು; ಉಚಿತವಾಗಿ ದೊರೆತವು ಎಂದು ನಿರ್ಲಕ್ಷ್ಯ ಮಾಡಬಾರದು ಎಂದು ಸಚಿವರು ಸೂಚಿಸಿದರು. ಸಾಧನಗಳ ಸರಿಯಾದ ಬಳಕೆ ಮತ್ತು ನಿರ್ವಹಣೆ ಕುರಿತು ತಜ್ಞ ವೈದ್ಯರು ಮಾರ್ಗದರ್ಶನ ನೀಡಿರುವುದಾಗಿ ತಿಳಿಸಿ, ಯಾವುದೇ ಸಂದೇಹ ಇದ್ದರೆ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು. ಆರೋಗ್ಯ ಇಲಾಖೆ ಮುಂದಿನ ವಾರ ಮತ್ತೊಮ್ಮೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಎಲ್ಲರೂ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿ, ಆರ್‌ಬಿಎಸ್‌ಕೆ ಯೋಜನೆಯಡಿ ಜಿಲ್ಲೆಯಲ್ಲಿ 2,12,000 ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಗತ್ಯವಿರುವವರಿಗೆ ಶಸ್ತ್ರಚಿಕಿತ್ಸೆ, ಕನ್ನಡಕ ಹಾಗೂ ಶ್ರವಣ ಸಾಧನಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು. ಈ ಕಾರ್ಯವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ರಾಜ್ ಮಹಲ್ ವಿಲಾಸ್ ಪ್ರತಿನಿಧಿ ರಾಜಾರಾಮ್ ಕೃಷ್ಣಮೂರ್ತಿ, ಮಾವಟೆ ಸಂಸ್ಥೆಯ ದಿವ್ಯ ಅಗರ್ವಾಲ್, ಸಂವಾದ್ ಫೌಂಡೇಷನ್‌ನ ರಾಧಿಕ ಪೂವಯ್ಯ, ಇಂಡಿಯಾ ಎನ್‌ಜಿಒ ಸಂಸ್ಥೆಯ ಕೃಷ್ಣಮೂರ್ತಿ, ಆರ್‌ಸಿ‌ಎಚ್‌ಓ ಡಾ. ಸಂತೋಷ್ ಬಾಬು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಚಂದ್ರಶೇಖರ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-28 11:37:49
No Reviews