ಡ್ರೋನ್ ಪರೀಕ್ಷಾ ಹಾರಾಟಕ್ಕೆ ಪೊಲೀಸರ ಕಿರುಕುಳ ಆರೋಪ:ಅಧಿಕಾರಿಗಳಿಗೆ ಹೈಕೋರ್ಟ್ ಎಚ್ಚರಿಕೆ!

ಡ್ರೋನ್ ಮಾದರಿಯ ಪರೀಕ್ಷಾ ಹಾರಾಟದ ವೇಳೆ ಅನಗತ್ಯವಾಗಿ ಪ್ರಕರಣ ದಾಖಲಿಸಿ, ಸಂಸ್ಥೆಯ ಅಧಿಕಾರಿಗಳನ್ನು ಸುಮಾರು 6 ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿಕೊಂಡಿದ್ದ ಕುರಿತು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಡ್ರೋನ್ ಪರೀಕ್ಷಾ ಹಾರಾಟದ ವೇಳೆ, ಡ್ರೋನ್ ಕಂಪೌಂಡ್ ದಾಟಿ ಬೇರೆ ಸ್ಥಳಕ್ಕೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು, ಎಫ್ಐಆರ್ ಪ್ರತಿಯನ್ನು ಸಂಸ್ಥೆಗೆ ನೀಡದೇ ಅಕ್ರಮ ಪ್ರವೇಶ ಪ್ರಕರಣ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಸಂಸ್ಥೆಯ ಎಂಡಿಯನ್ನು ಠಾಣೆಗೆ ಕರೆಸಿ ಲಾಭ–ನಷ್ಟ ಹಾಗೂ ವ್ಯವಹಾರ ಸಂಬಂಧಿತ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ.

ಡಿಜಿಸಿಎ (DGCA) ಅನುಮತಿ ಇದ್ದರೂ ಪೊಲೀಸರಿಂದ ಕಿರುಕುಳ ನೀಡಲಾಗಿದೆ ಎಂದು ಸಂಸ್ಥೆ ಪರ ವಕೀಲ ಅಂಗದ್ ಕಾಮತ್ ವಾದ ಮಂಡಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಸಂಬಂಧಿಸಿದ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅವರಿಂದ ಪ್ರಮಾಣಪತ್ರದ ಮೂಲಕ ವಿವರಣೆ ನೀಡುವಂತೆ ಸೂಚಿಸಿದೆ. ಸೂಕ್ತ ವಿವರಣೆ ನೀಡದಿದ್ದರೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-06 16:15:01
No Reviews