ಕಸಕ್ಕೆ ಅಡ್ಡಿ ಸಹಿಸೋಲ್ಲ! ಬಿಜೆಪಿ ಶಾಸಕರಿಗೆ ಡಿಕೆಶಿ ಎಚ್ಚರಿಕೆ

ಮಹದೇವಪುರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸುವ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅನುದಾನ ಬೇಕೆಂದು ಕೆಲ ಶಾಸಕರು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ; ಹೀಗೆ ಅಡ್ಡಿಪಡಿಸಿದರೆ ಕಸ ಎಲ್ಲಿಗೆ ಹೋಗಬೇಕು? ಆರ್‌.ಅಶೋಕ್‌, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹಾಕಬೇಕಾಗುತ್ತದೆಯೇ ಎಂದು ಕಿಡಿಕಾರಿದರು.

ಅಪಘಾತವಾಗಿದೆ ಎಂದ ಕಾರಣಕ್ಕೆ ಕಸ ವಿಲೇವಾರಿ ನಿಲ್ಲಿಸುವುದು ಸರಿಯಲ್ಲ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದ ಅವರು, ಇತರ ಕ್ಷೇತ್ರಗಳಲ್ಲೂ ವಿಲೇವಾರಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು. ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಿ ಟೆಂಡರ್‌ ಕರೆಯಲಾಗಿದ್ದು, ಕಾನೂನು ಅಡಚಣೆಗಳನ್ನು ನಿವಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಅನುದಾನ ಕೊರತೆ ಹಾಗೂ ಗುತ್ತಿಗೆದಾರರ ಅಸಮಾಧಾನಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸಿದ ಡಿಕೆಶಿ, ಬಜೆಟ್‌ ಪ್ರಕಾರ ಸಾಧ್ಯವಾದಷ್ಟು ಹಣ ಬಿಡುಗಡೆ ಮಾಡಲಾಗುತ್ತಿದೆ; ಬ್ಲಾಕ್‌ಮೇಲ್‌ ಸಹಿಸಲಾಗುವುದಿಲ್ಲ ಎಂದು ಖಡಕ್‌ವಾಗಿ ಹೇಳಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-18 17:53:05
No Reviews