ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಡಿಜಿಟಲ್ ಕ್ರಾಂತಿ ಆರಂಭ

ಚಿಲ್ಲರೆ ಕಿರಿಕಿರಿಗೆ ಅಂತ್ಯ: ಕೆಕೆಆರ್‌ಟಿಸಿ ಬಸ್‌ಗಳಲ್ಲಿ 100% ಯುಪಿಐ ಸ್ಮಾರ್ಟ್ ಸೇವೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ತನ್ನ ಎಲ್ಲಾ ಬಸ್‌ಗಳಲ್ಲಿ ಶೇ.100ರಷ್ಟು ನಗದುರಹಿತ ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಆರಂಭದಲ್ಲಿ ಕಂಡುಬಂದ ತಾಂತ್ರಿಕ ಹಾಗೂ ನೆಟ್‌ವರ್ಕ್ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲಾಗಿದ್ದು, ಈಗ ಪ್ರಯಾಣಿಕರಿಗೆ ಸುಗಮ ಡಿಜಿಟಲ್ ಸೇವೆ ಲಭ್ಯವಾಗಿದೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಗ್ರಾಮೀಣ ಹಾಗೂ ನಗರ ಸಾರಿಗೆ ಜಾಲದಲ್ಲಿ ಈ ಸ್ಮಾರ್ಟ್ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.

ಬಸ್ ಹತ್ತಿದ ತಕ್ಷಣ ಪ್ರಯಾಣಿಕರು ತಲುಪುವ ಸ್ಥಳವನ್ನು ತಿಳಿಸಿದರೆ, ನಿರ್ವಾಹಕರು ಆಂಡ್ರಾಯ್ಡ್ ಇಟಿಎಂ ಮೂಲಕ ಟಿಕೆಟ್ ವಿವರ ದಾಖಲಿಸುತ್ತಾರೆ. ತಕ್ಷಣ ಪರದೆಯ ಮೇಲೆ QR ಕೋಡ್ ಮೂಡಿ, ಗೂಗಲ್ ಪೇ, ಫೋನ್‌ಪೇ ಸೇರಿದಂತೆ ಯಾವುದೇ ಯುಪಿಐ ಆಪ್ ಮೂಲಕ ಕೇವಲ ಕೆಲವೇ ಸೆಕೆಂಡುಗಳಲ್ಲಿ ಪಾವತಿ ಸಾಧ್ಯವಾಗುತ್ತದೆ. ಸುಮಾರು 90 ಸೆಕೆಂಡುಗಳಲ್ಲಿ ಮುದ್ರಿತ ಟಿಕೆಟ್ ಪ್ರಯಾಣಿಕರ ಕೈ ಸೇರುತ್ತಿದೆ.

ಈ ಹೊಸ ವ್ಯವಸ್ಥೆಯಿಂದ ಚಿಲ್ಲರೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಿದ್ದು, ಹಿಂದೆ ಟಿಕೆಟ್ ಹಿಂಭಾಗದಲ್ಲಿ ಬಾಕಿ ಹಣ ಬರೆಯುವ ಪದ್ಧತಿಗೂ ಅಂತ್ಯ ಬಂದಿದೆ. ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವಿನ ಚಿಲ್ಲರೆ ಸಂಬಂಧಿತ ಗೊಂದಲಗಳು ಈಗ ಕಡಿಮೆಯಾಗಿವೆ.

ಪ್ರತಿದಿನ ಸಂಗ್ರಹವಾಗುವ ಆದಾಯದ ಶೇ.50ರಷ್ಟು ‘ಶಕ್ತಿ ಯೋಜನೆ’ಯಡಿ ಮರುಪಾವತಿಯಾಗುತ್ತಿದ್ದು, ಉಳಿದ ನಗದುರಹಿತ ಹಣ ನೇರವಾಗಿ ಡಿಪೋ ಖಾತೆಗಳಿಗೆ ಜಮೆಯಾಗುತ್ತಿದೆ. ಇದರಿಂದ ಆಡಳಿತಾತ್ಮಕ ಪಾರದರ್ಶಕತೆ ಹೆಚ್ಚಾಗಿ, ಹಣಕಾಸು ನಿರ್ವಹಣೆ ಹೆಚ್ಚು ಸುಗಮವಾಗಿದೆ.

ಆರಂಭಿಕ ಹಂತದಲ್ಲಿ 5000 ಬಸ್‌ಗಳಲ್ಲಿ ಪ್ರಯೋಗಾತ್ಮಕವಾಗಿ ಜಾರಿಗೆ ತಂದಿದ್ದ ಈ ವ್ಯವಸ್ಥೆ, ಈಗ ಸಂಪೂರ್ಣ ನಿಗಮದ ಬಸ್‌ಗಳಲ್ಲಿ ಯಶಸ್ವಿಯಾಗಿ ವಿಸ್ತರಿಸಲಾಗಿದೆ. ನಿರ್ವಾಹಕರಿಗೆ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದ್ದು, ತಾಂತ್ರಿಕ ಬೆಂಬಲವೂ ನಿರಂತರವಾಗಿ ಲಭ್ಯವಿದೆ.

ಈ ಕುರಿತು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರು ಮಾತನಾಡಿ, “ಇದು ನಿಗಮದ ಡಿಜಿಟಲ್ ಪರಿವರ್ತನೆಯ ಮಹತ್ವದ ಮೈಲಿಗಲ್ಲು. ಪ್ರಯಾಣಿಕರಿಗೆ ಸುಲಭ, ವೇಗ ಹಾಗೂ ಪಾರದರ್ಶಕ ಸೇವೆ ನೀಡುವ ಗುರಿ ಇದರಿಂದ ಸಾಧನೆಯಾಗಿದೆ” ಎಂದು ತಿಳಿಸಿದ್ದಾರೆ.

ಪ್ರಯಾಣಿಕ ಸುರೇಶ್ ದೇಶಮುಖ ಅವರ ಪ್ರಕಾರ, “ಈ ವ್ಯವಸ್ಥೆಯಿಂದ ಗ್ರಾಮೀಣ ಭಾಗದ ಜನರಿಗೆ ಬಹಳ ಅನುಕೂಲವಾಗಿದೆ. ಚಿಲ್ಲರೆಗಾಗಿ ಆಗುತ್ತಿದ್ದ ತೊಂದರೆ ಈಗ ಸಂಪೂರ್ಣವಾಗಿ ಮುಕ್ತವಾಗಿದೆ” ಎಂದು ಹೇಳಿದ್ದಾರೆ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-09 11:54:57
No Reviews