1400 ಕೋಟಿ ಬಜೆಟ್, 6 ಕೋಟಿ ಕಲೆಕ್ಷನ್: ಇತಿಹಾಸದ ಅತಿದೊಡ್ಡ ಫ್ಲಾಪ್ ಸಿನಿಮಾ

ವಿಶ್ವದ ಸಿನಿಮಾ ಉದ್ಯಮ ದಿನೇದಿನೇ ದೊಡ್ಡ ಮಟ್ಟದಲ್ಲಿ ವಿಸ್ತರಿಸುತ್ತಿದೆ. ಇತ್ತೀಚೆಗೆ ಭಾರತದ ‘ವಾರಣಾಸಿ’ ಮತ್ತು ‘ರಾಮಾಯಣ’ ಚಿತ್ರಗಳು ಭಾರಿ ಬಜೆಟ್ ಸಿನಿಮಾಗಳಾಗಿ ಗಮನ ಸೆಳೆಯುತ್ತಿವೆ. ಅದೇ ವೇಳೆ ಚೀನಾದ ‘Ne Zha 2’ ಕೇವಲ 755 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಸುಮಾರು 21 ಸಾವಿರ ಕೋಟಿ ರೂ. ಗಳಿಸಿ ಅಚ್ಚರಿ ಮೂಡಿಸಿದೆ.

ಇದೇ ಸಂದರ್ಭದಲ್ಲಿ ಐದು ವರ್ಷಗಳ ಹಿಂದೆ ಸೌದಿ ಅರೇಬಿಯಾದ ಮನರಂಜನಾ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ತರುವ ಉದ್ದೇಶದಿಂದ MBC Studios ನಿರ್ಮಿಸಿದ ‘Desert Warrior’ ಸಿನಿಮಾ ಇಂದು ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಬಾಕ್ಸ್ ಆಫೀಸ್ ವೈಫಲ್ಯವಾಗಿ ಗುರುತಿಸಲಾಗಿದೆ.

ಸುಮಾರು 1400 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿತ ಈ ಚಿತ್ರವು 7ನೇ ಶತಮಾನದ ಅರೇಬಿಯಾದ ಹಿನ್ನೆಲೆಯ ಕಥೆಯನ್ನು ಹೊಂದಿತ್ತು. ರಾಜಕುಮಾರಿ ಹಿಂದ್ ಅವರ ಹೋರಾಟದ ಕಥಾವಸ್ತುವಿನೊಂದಿಗೆ ರೂಪರ್ಟ್ ವ್ಯಾಟ್ ನಿರ್ದೇಶನದಲ್ಲಿ ಹಾಲಿವುಡ್ ತಾರಾಗಣವೂ ಚಿತ್ರದಲ್ಲಿತ್ತು. ಆಂಥೋನಿ ಮ್ಯಾಕಿ, ಆಸ್ಕರ್ ವಿಜೇತ ಬೆನ್ ಕಿಂಗ್ಸ್ಲಿ, ಶಾರ್ಲ್ಟೋ ಕಾಪ್ಲೆ ಮತ್ತು ಆಯಿಷಾ ಹಾರ್ಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಭಾರೀ ವಿಎಫ್‌ಎಕ್ಸ್, ಅದ್ದೂರಿ ಸೆಟ್‌ಗಳು ಮತ್ತು ದೊಡ್ಡ ತಂಡದ ಕೆಲಸದಿಂದ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು.

ಆದರೆ ಬಿಡುಗಡೆಯ ನಂತರ ಫಲಿತಾಂಶ ಸಂಪೂರ್ಣ ವಿಭಿನ್ನವಾಗಿತ್ತು. ಅಮೆರಿಕಾ ಮತ್ತು ಸೌದಿ ಅರೇಬಿಯಾದಲ್ಲಿ ಸೇರಿ ಒಟ್ಟಾರೆ ಕಲೆಕ್ಷನ್ ಕೇವಲ 6 ಕೋಟಿ ರೂ. ಆಗಿದ್ದು, ನಿರ್ಮಾಣ ವೆಚ್ಚದ 1 ಶೇಕಡಕ್ಕೂ ಕಡಿಮೆ. ಸುಮಾರು ಶೇ. 99ಕ್ಕೂ ಹೆಚ್ಚು ನಷ್ಟ ಅನುಭವಿಸಿದ ಈ ಸಿನಿಮಾ, ಬೃಹತ್ ಬಜೆಟ್ ಇದ್ದರೂ ಯಶಸ್ಸು ಖಚಿತವಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಯಿತು.

ಮಾರ್ಕೆಟಿಂಗ್ ಕೊರತೆ, ಬಿಡುಗಡೆ ವಿಳಂಬ ಮತ್ತು ನಕಾರಾತ್ಮಕ ವಿಮರ್ಶೆಗಳು ಈ ಭಾರಿ ವೈಫಲ್ಯಕ್ಕೆ ಪ್ರಮುಖ ಕಾರಣಗಳಾಗಿ ಗುರುತಿಸಲ್ಪಟ್ಟಿವೆ. ಹೀಗಾಗಿ ‘ಡೆಸರ್ಟ್ ವಾರಿಯರ್’ ಸಿನಿಮಾ ಜಾಗತಿಕ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಬಾಕ್ಸ್ ಆಫೀಸ್ ಸೋಲುಗಳಲ್ಲಿ ಒಂದಾಗಿ ದಾಖಲಾಗಿದೆ.

 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-08 16:09:30
No Reviews