ನಾನು- ಸಿಎಂ ಏನು ಮಾತಾಡಿಕೊಂಡಿದ್ದೇವೆ ಎಂಬುದು ಗೊತ್ತಿದೆ: ಡಿಕೆ ಶಿವಕುಮಾರ್

ಗೊಂದಲ ಬೇರೆಯವರಿಗೆ ಇರಬಹುದು, ಆದರೆ ನನಗೆ ಯಾವುದೇ ಗೊಂದಲವೇ ಇಲ್ಲ. ನಾವು ಮತ್ತು ನಮ್ಮ ವರಿಷ್ಠರು ಎಲ್ಲವನ್ನೂ ಮಾತುಕತೆ ಮೂಲಕ ಸ್ಪಷ್ಟಪಡಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೇರೆಯವರು ಅನಗತ್ಯ ಟೆನ್ಶನ್ ತೆಗೆದುಕೊಳ್ಳುವುದರಿಂದಲೂ, ಹೇಳಿಕೆ ನೀಡುವುದರಿಂದಲೂ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದರು.

ನನ್ನ ಪರ ಅಥವಾ ವಿರುದ್ಧವಾಗಿ ಶಾಸಕರು, ಸಚಿವರು ಹೇಳಿಕೆ ನೀಡಿದರೆ ಅದು ಪಕ್ಷಕ್ಕೆ ಹಾನಿ ಉಂಟುಮಾಡುತ್ತದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಖರ್ಗೆಯವರು ಸೂಚಿಸಿದ್ದಾರೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಕೆಶಿ ಹೇಳಿದರು.

ಅಸ್ಸಾಂ ಚುನಾವಣೆಯ ವಿಚಾರವಾಗಿ ಇಂದು ಸಂಜೆ ಎಐಸಿಸಿ ಚರ್ಚೆಗೆ ಕರೆಯಲಾಗಿದೆ. ಕೇರಳದ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಅಸ್ಸಾಂಗೆ ತೆರಳಬೇಕಿದೆ ಎಂದು ಮಾಹಿತಿ ನೀಡಿದರು.

ಬಜೆಟ್ ಸಭೆಗೆ ಗೈರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಬಜೆಟ್ ಮೀಟಿಂಗ್ ಬಗ್ಗೆ ಸಿಎಂಗೆ ಮುಂಚೆಯೇ ತಿಳಿಸಿದ್ದೇನೆ. ನಿನ್ನೆ ಸಭೆ ನಡೆದಿದೆ, ಮುಂದಿನ ಸಭೆಯನ್ನು ಸಿಎಂ ನಡೆಸಲಿದ್ದಾರೆ. ದೆಹಲಿಯಿಂದ ಮರಳಿದ ನಂತರ ಈ ಕುರಿತು ಮಾತನಾಡುತ್ತೇನೆ ಎಂದು ಹೇಳಿದರು.

ಕೇಂದ್ರ ಬಜೆಟ್ ಬಗ್ಗೆ ಟೀಕಿಸಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲ. ಹೈ-ಸ್ಪೀಡ್ ರೈಲು ಸೇರಿದಂತೆ ಯಾವುದೇ ಮಹತ್ವದ ಯೋಜನೆ ರಾಜ್ಯಕ್ಕೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿಯಿಂದ ಗುಡ್ ನ್ಯೂಸ್ ತರುತ್ತೀರಾ ಎಂಬ ಪ್ರಶ್ನೆಗೆ, ಪ್ರತಿ ದಿನವೂ ಒಳ್ಳೆಯದೂ ಇದೆ, ಕಷ್ಟವೂ ಇದೆ. ಜನರ ಸಮಸ್ಯೆಗಳನ್ನು ಬಗೆಹರಿಸುವುದು ಸುಲಭವಲ್ಲ. ಟೀಕೆಗಳು ಬರುತ್ತಲೇ ಇರುತ್ತವೆ, ಅವನ್ನು ಎದುರಿಸುತ್ತಲೇ ನಮ್ಮ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಯತೀಂದ್ರಗೆ ನೋಟಿಸ್ ನೀಡದ ವಿಚಾರವಾಗಿ ಇಕ್ಬಾಲ್ ಹುಸೇನ್ ನೀಡಿದ ಹೇಳಿಕೆ ಕುರಿತು ಕೇಳಿದಾಗ, ಅದನ್ನು ಹೈಕಮಾಂಡ್ ಬಳಿ ಕೇಳೋಣ ಎಂದು ಹೇಳಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದರು.

ಮನರೇಗಾ ಉಳಿಸಲು ಹೋರಾಟ

ಮನರೇಗಾ ಯೋಜನೆ ಉಳಿಸಲು ರಾಜಭವನ ಚಲೋ ನಡೆಸಲಾಗುವುದು. ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-10 16:22:07
No Reviews