ಆಸೆ ಇರುವುದು ಸಹಜ – ಸಿಎಂ ವಿಚಾರದ ಪ್ರಶ್ನೆಗೆ ಡಿಕೆಶಿ ಉತ್ತರ

ಬೆಂಗಳೂರುನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಇದು ಯಾವುದೇ ಶಕ್ತಿ ಪ್ರದರ್ಶನ ಅಲ್ಲ” ಎಂದು ಸ್ಪಷ್ಟಪಡಿಸಿದರು.

“ಕೆಲವರು ವಿಶ್ರಾಂತಿ ಪಡೆಯಲು, ಕೆಲವರು ಶಿಕ್ಷಣದ ಕಾರಣಕ್ಕೆ ವಿದೇಶಕ್ಕೆ ಹೋಗುತ್ತಾರೆ. ಕೆಲವರು ಊಟ ಮಾಡುತ್ತಾರೆ, ಕೆಲವರು ದೆಹಲಿಗೆ ಹೋಗುತ್ತಾರೆ. ಇದು ಅವರ ವೈಯಕ್ತಿಕ ವಿಚಾರ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ,” ಎಂದು ಹೇಳಿದರು. ಡಿನ್ನರ್ ಸಭೆಯನ್ನು ರಾಜಕೀಯ ಶಕ್ತಿ ಪ್ರದರ್ಶನ ಎಂದು ಕಾಣುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಡಿಸಿಎಂ ನೀಡಿದರು.

“ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು” ಎಂದು ಕೆಲವು ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, “ಆಸೆ ಇರುವುದು ಸಹಜ. ಎಲ್ಲರೂ ಹೊಸಬರು ಅಲ್ಲವಾ? ಕೆಲವರು ಮಂತ್ರಿ ಆಗಬೇಕು ಎಂದುಕೊಳ್ಳುತ್ತಾರೆ. ನಾವೆಲ್ಲ ಚಿಕ್ಕ ವಯಸ್ಸಿನಲ್ಲೇ ಮಂತ್ರಿಗಳಾಗಿದ್ದವರು,” ಎಂದು ಹೇಳಿದರು.

ತಮ್ಮ ಜೊತೆಗೆ ಸಿದ್ದರಾಮಯ್ಯ, ಪರಮೇಶ್ವರ್, HK ಪಾಟೀಲ್, ಮಹದೇವಪ್ಪ ಮೊದಲಾದವರು ಕಡಿಮೆ ವಯಸ್ಸಿನಲ್ಲಿ ಮಂತ್ರಿಗಳಾದ ಉದಾಹರಣೆಯನ್ನು ಉಲ್ಲೇಖಿಸಿದರು. “ಹೊಸಬರು ಆಸೆಪಡುತ್ತಾರೆ. ‘ನೀವಷ್ಟೇ ಆಗ ಮಂತ್ರಿಯಾದ್ರಿ, ನಮ್ಮನ್ನೂ ಮಂತ್ರಿ ಮಾಡಿಸಿ’ ಎಂದು ಕೇಳುತ್ತಾರೆ. ಈ ಎಲ್ಲ ವಿಚಾರಗಳೂ ದೆಹಲಿಯವರಿಗೆ ಗೊತ್ತಿರುತ್ತದೆ,” ಎಂದು ಹೇಳಿದರು.

ಸಿಎಂ ಆಗಬೇಕೆಂದು ಬೆಂಬಲಿಗರು ಕೇಳುತ್ತಿದ್ದಾರೆ ಎಂಬ ಪ್ರಶ್ನೆಗೆ, “ನನಗೆ ಅದರ ಬಗ್ಗೆ ಗೊತ್ತಿಲ್ಲ. ನನ್ನ ಹತ್ತಿರ ಯಾರೂ ಬಂದು ಮಾತಾಡಿಲ್ಲ. ಅವರು ಬಂದು ಮಾತಾಡಲಿ, ಆಮೇಲೆ ಮಾತನಾಡುತ್ತೇನೆ,” ಎಂದು ಡಿ.ಕೆ. ಶಿವಕುಮಾರ್ ಉತ್ತರಿಸಿದರು.

ಈ ಮೂಲಕ ಡಿನ್ನರ್ ಸಭೆಯ ರಾಜಕೀಯ ಅರ್ಥಗಳನ್ನು ತಳ್ಳಿಹಾಕಿದ ಡಿಸಿಎಂ, ಅದನ್ನು ವೈಯಕ್ತಿಕ ಮಟ್ಟದ ವಿಚಾರವೆಂದು ಸ್ಪಷ್ಟಪಡಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-27 16:42:47
No Reviews