ದರ್ಶನ್‌ ಬರ್ತ್‌ಡೇ ದಿನ ಕೋರ್ಟ್ ತೀರ್ಪು; ಪವಿತ್ರಾಗೆ ನಿರಾಸೆ

ಪವಿತ್ರಾ ಗೌಡ ಅವರು ತಮ್ಮ ಮಗಳ ಬೋರ್ಡ್ ಪರೀಕ್ಷೆಯ ಹಿನ್ನೆಲೆ ನೀಡಿ ಮಧ್ಯಂತರ ಜಾಮೀನು ಕೋರಿ 57ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್, ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಪ್ರಗತಿಯಲ್ಲಿರುವುದರಿಂದ ಜಾಮೀನು ನೀಡಬಾರದು ಎಂದು ವಾದಿಸಿತು. ವಾದ–ಪ್ರತಿವಾದ ಆಲಿಸಿದ ನ್ಯಾಯಾಲಯ, ಪವಿತ್ರಾಗೌಡ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಆದೇಶವನ್ನು ನ್ಯಾಯಾಧೀಶ ಐ.ಪಿ. ನಾಯಕ್ ಅವರು ನೀಡಿದ್ದಾರೆ.

ಈ ಹಿಂದೆ ಪವಿತ್ರಾ ಗೌಡ ಜೈಲು ಊಟದಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ಮನವಿ ಮಾಡಿ ಮನೆ ಊಟಕ್ಕೆ ಅನುಮತಿ ಪಡೆದಿದ್ದರು. ಕೆಲ ದಿನಗಳ ಕಾಲ ಅವಕಾಶ ನೀಡಲಾಗಿದ್ದರೂ, ನಂತರ ಅದನ್ನು ನ್ಯಾಯಾಲಯ ರದ್ದುಪಡಿಸಿತ್ತು. ಇದೇ ಪ್ರಕರಣದಲ್ಲಿ 11ನೇ ಆರೋಪಿ ನಾಗರಾಜ್ ಕೂಡ ತಮ್ಮ ಪತ್ನಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದನ್ನು ಉಲ್ಲೇಖಿಸಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನೂ ಇಂದು ಕೋರ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದನೆಂಬ ಆರೋಪದ ಹಿನ್ನೆಲೆ, ನಟ ದರ್ಶನ್ ಹಾಗೂ ಅವರ ಸಹಚರರು ಅಪಹರಿಸಿ ಬೆಂಗಳೂರಿಗೆ ಕರೆತಂದು, ಪಟ್ಟಣಗೆರೆಯ ಶೆಡ್‌ನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ಈ ಪ್ರಕರಣದಲ್ಲಿದೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿಯಾಗಿ ಹೆಸರುಗೊಂಡಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-16 16:18:40
No Reviews