ಟಾಕ್ ಶೋನಲ್ಲಿ ಶೇಖರ್ ಸುಮನ್ ಮ್ಯಾಜಿಕ್: ಮತ್ತೆ ಕಾಮಿಡಿ ಕಿಕ್

ಭಾರತದಲ್ಲಿ ಸ್ಟಾಂಡಪ್ ಕಾಮಿಡಿ, ಪೊಲಿಟಿಕಲ್ ಸಟೈರ್ ಮತ್ತು ಮಿಮಿಕ್ರಿಗೆ ದಶಕಗಳ ಹಿಂದೆಯೇ ಹೊಸ ದಿಕ್ಕು ತೋರಿಸಿದ್ದ ಶೇಖರ್ ಸುಮನ್ ಇದೀಗ ಮತ್ತೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ‘ಶೇಖರ್ ಟುನೈಟ್’ ಹೆಸರಿನ ಹೊಸ ಯೂಟ್ಯೂಬ್ ಟಾಕ್ ಶೋ ಮೂಲಕ ಅವರು ಡಿಜಿಟಲ್ ವೇದಿಕೆಯಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, ಹಳೆಯ ಅಭಿಮಾನಿಗಳ ಜೊತೆಗೆ ಹೊಸ ಪೀಳಿಗೆಯ ಗಮನವನ್ನೂ ಸೆಳೆಯುತ್ತಿದ್ದಾರೆ. 90ರ ದಶಕದಲ್ಲಿ ‘ಮೂವರ್ಸ್ ಅಂಡ್ ಶೇಕರ್ಸ್’ ಮೂಲಕ ಲೇಟ್ ನೈಟ್ ಟಾಕ್ ಶೋ ಸಂಸ್ಕೃತಿಯನ್ನು ಜನಪ್ರಿಯಗೊಳಿಸಿದ್ದ ಶೇಖರ್, ಇದೀಗ ಅದೇ ಶೈಲಿಯನ್ನು ಆಧುನಿಕ ಮಾದರಿಯಲ್ಲಿ ಮರುಪರಿಚಯಿಸಿದ್ದಾರೆ.

ಈ ಶೋ ಕೇವಲ ಸೆಲೆಬ್ರಿಟಿ ಸಂದರ್ಶನವಲ್ಲ; ಯಾವುದೇ ಸ್ಕ್ರಿಪ್ಟ್ ಇಲ್ಲದ ಸ್ವಾಭಾವಿಕ ಸಂಭಾಷಣೆ, ರಾಜಕೀಯ ಚುಟುಕುಗಳು, ವಿಡಂಬನೆ ಮತ್ತು ಭಾವನಾತ್ಮಕ ಕ್ಷಣಗಳ ಮಿಶ್ರಣವೇ ಇದರ ವಿಶೇಷತೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಾಬಿ ಡಿಯೋಲ್, ಮನೋಜ್ ಬಾಜಪೇಯಿ, ಫರಾ ಖಾನ್ ಸೇರಿದಂತೆ ಹಲವು ಗಣ್ಯರು ಈಗಾಗಲೇ ಈ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಪ್ರಧಾನಿ ಮೋದಿ ಸೇರಿದಂತೆ ರಾಜಕೀಯ ನಾಯಕರ ಕುರಿತ ಶೇಖರ್ ಸುಮನ್ ಅವರ ಚುಟುಕು ಶೈಲಿ ಮತ್ತೆ ವೈರಲ್ ಆಗುತ್ತಿದೆ.

ಹಾಲಿವುಡ್‌ನ ಜನಪ್ರಿಯ ‘ಜಿಮ್ಮಿ ಕ್ಯಾಮೆಲ್ ಶೋ’ ಮಾದರಿಯಲ್ಲಿ ಮೂಡಿಬರುತ್ತಿರುವ ‘ಶೇಖರ್ ಟುನೈಟ್’ ಅನ್ನು ಅವರ ಪುತ್ರ ಅಧ್ಯಯನ್ ಸುಮನ್ ಕ್ರಿಯೇಟ್ ಮಾಡಿರುವುದು ಮತ್ತೊಂದು ಕುತೂಹಲದ ಸಂಗತಿ. ಹಲವು ವರ್ಷಗಳ ಬಳಿಕ ಶೇಖರ್ ಸುಮನ್ ಮತ್ತೆ ತಮ್ಮ ಹಳೆಯ ಮ್ಯಾಜಿಕ್ ಮರುಕಳಿಸುತ್ತಾರಾ ಎಂಬ ಪ್ರಶ್ನೆಗೆ ಈಗ ಈ ಶೋನೇ ಉತ್ತರವಾಗುತ್ತಿದೆ.

 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-20 15:22:34
No Reviews