ಕಾಕ್ರೋಚ್ ಜನತಾ ಪಕ್ಷ ಇನ್‌ಸ್ಟಾ ಹ್ಯಾಕ್ ಟ್ವಿಸ್ಟ್

ದೇಶದ ಯುವಜನರಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದ್ದು, ಪಕ್ಷದ ಬ್ಯಾಕಪ್ ಇನ್‌ಸ್ಟಾಗ್ರಾಂ ಖಾತೆಯನ್ನೂ ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ನಂತರ ಕೆಲವು ಗಂಟೆಗಳ ಬಳಿಕ ಬ್ಯಾಕಪ್ ಖಾತೆ ಪುನಃಸ್ಥಾಪನೆಯಾಗಿದೆ.

ತಮ್ಮ ವೈಯಕ್ತಿಕ ಖಾತೆಯನ್ನು ಮರುಪಡೆಯಲು ಮೆಟಾದ ಖಾತೆ ರಿಕವರಿ ಪ್ರಕ್ರಿಯೆಯ ಮೂಲಕ ಹಲವು ಬಾರಿ ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ ಎಂದು ದಿಪ್ಕೆ ಹೇಳಿದ್ದಾರೆ. ಪ್ರತಿಯೊಂದು ಬಾರಿ “ಸುರಕ್ಷತಾ ಕಾರಣಗಳಿಂದ ಖಾತೆ ಲಾಕ್ ಮಾಡಲಾಗಿದೆ, ಗುರುತಿನ ಪರಿಶೀಲನೆ ಅಗತ್ಯ” ಎಂಬ ಸಂದೇಶ ಮಾತ್ರ ಕಾಣಿಸುತ್ತಿದೆ ಎಂದು ಅವರು ಸ್ಕ್ರೀನ್‌ಶಾಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ದಿಪ್ಕೆ, ತಮ್ಮ ಇನ್‌ಸ್ಟಾಗ್ರಾಂ, ಎಕ್ಸ್ ಹಾಗೂ ಬ್ಯಾಕಪ್ ಖಾತೆಗಳನ್ನೂ ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. “ಈಗ ನಡೆಯುತ್ತಿರುವ ಯಾವುದೇ ಪೋಸ್ಟ್‌ಗಳು ಪಕ್ಷದ ಅಧಿಕೃತ ಹೇಳಿಕೆಗಳಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇವಲ 5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್‌ಗಳನ್ನು ಗಳಿಸಿ ಯುವಜನರಲ್ಲಿ ಗಮನ ಸೆಳೆದಿರುವ CJP, ಇದೀಗ ಸಾಮಾಜಿಕ ಜಾಲತಾಣ ಹ್ಯಾಕ್ ಆರೋಪದಿಂದ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-23 11:54:19
No Reviews