ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ರಾಮಲಿಂಗಾರೆಡ್ಡಿ ರಾಜೀನಾಮೆ ವಿವಾದಕ್ಕೆ ತೆರೆ ಎಳೆದ ಡಿಕೆ ಶಿವಕುಮಾರ್

ಬೆಂಗಳೂರು, ಜೂನ್ 6: “ರಾಮಲಿಂಗಾರೆಡ್ಡಿ ಅವರು ನನ್ನ ಆತ್ಮೀಯ ಸ್ನೇಹಿತರು. ಅವರೊಂದಿಗೆ ಮಾತನಾಡಿದ್ದು, ಎಲ್ಲಾ ಸಮಸ್ಯೆಗಳು ಬಗೆಹರಿದಿವೆ. ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಅಂಗೀಕರಿಸುವುದಿಲ್ಲ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಶುಕ್ರವಾರ ರಾತ್ರಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ವಿಚಾರವನ್ನು ಸ್ಪಷ್ಟಪಡಿಸಿದ ಅವರು, “ಅನಗತ್ಯವಾಗಿ ಊಹಾಪೋಹಗಳನ್ನು ಸೃಷ್ಟಿಸಬೇಡಿ. ಅವರು ರಾಜೀನಾಮೆಯನ್ನು ವಾಟ್ಸಪ್ ಮೂಲಕ ಕಳುಹಿಸಿದ್ದರು, ಈಗ ಆ ವಿಷಯ ಬಗೆಹರಿಸಲಾಗಿದೆ,” ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಸಿಎಂ ತಿಳಿಸಿದರು. ರಾಜ್ಯಸಭೆಗೆ 3 ಮತ್ತು ವಿಧಾನ ಪರಿಷತ್‌ಗೆ 5 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದರು ಎಂದು ಅವರು ತಿಳಿಸಿದರು.

ಇದೇ ವೇಳೆ ಎಐಸಿಸಿ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಹಾಗೂ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಅವರನ್ನು ರಾಜ್ಯದಿಂದ ಕಣಕ್ಕೆ ಇಳಿಸಿರುವುದಾಗಿ ಹೇಳಿದರು. ಎಲ್ಲ ಸ್ಥಾನಗಳಿಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದರು.

ರಾಜಕೀಯಕ್ಕಿಂತ ಜನಹಿತ ಮುಖ್ಯ: ಡಿಕೆಶಿ

ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಅವರು ನನಗೆ ಶುಭ ಕೋರಿದ್ದಾರೆ, ಅವರಿಗೆ ಧನ್ಯವಾದ. ನಾನು ಶೀಘ್ರದಲ್ಲೇ ಅವರನ್ನು ಭೇಟಿಯಾಗುತ್ತೇನೆ. ರಾಜಕೀಯಕ್ಕಿಂತ ಜನರ ಹಿತ ಮುಖ್ಯ. ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ,” ಎಂದು ಹೇಳಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-06-06 17:07:11
No Reviews