ಚಿರಂಜೀವಿಯನ್ನು ಟೀಕಿಸಿದವರಿಗೆ ಲಾವಣ್ಯ ತ್ರಿಪಾಠಿ ಖಡಕ್ ಎಚ್ಚರಿಕೆ!

ಮೆಗಾ ಕುಟುಂಬದಲ್ಲಿ ಸದ್ಯ ಸಂತೋಷದ ವಾತಾವರಣ ಮನೆಮಾಡಿದೆ. ನಟ ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಅವಳಿ ಮಕ್ಕಳು ಜನಿಸಿದ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ಅಭಿಮಾನಿಗಳು, ಸಿನಿಮಾ–ರಾಜಕೀಯ–ಉದ್ಯಮ ರಂಗದ ಗಣ್ಯರು ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ಈ ಸಂಭ್ರಮದ ನಡುವೆ, ಮೆಗಾ ಸ್ಟಾರ್ ಚಿರಂಜೀವಿ ಈ ಹಿಂದೆ ನೀಡಿದ್ದ ‘ವಾರಸುದಾರ’ ಕುರಿತ ಹೇಳಿಕೆಗಳು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ.

"ಮನೆಯಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳೇ ಇದ್ದಾರೆ, ಒಬ್ಬ ವಾರಸುದಾರನನ್ನು ನೀಡುವಂತೆ ಚರಣ್ಗೆ ಕೇಳುತ್ತಿದ್ದೇನೆ" ಎಂದು ಚಿರಂಜೀವಿ ಅವರು ಹಾಸ್ಯಭರಿತವಾಗಿ ಹೇಳಿದ್ದ ಮಾತುಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದೀಗ ರಾಮ್ ಚರಣ್–ಉಪಾಸನಾ ದಂಪತಿಗೆ ಜನಿಸಿದ ಅವಳಿ ಮಕ್ಕಳಲ್ಲಿ ಗಂಡು ಮಗು ಕೂಡ ಇರುವ ಹಿನ್ನೆಲೆಯಲ್ಲಿ, ಹಳೆಯ ಹೇಳಿಕೆಗಳನ್ನು ಕೆದಕಿ ಚಿರಂಜೀವಿಯನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮಾಡಿದ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. "ಗಂಡು ಮಗು ಹುಟ್ಟಿದಾಗ ತೋರಿಸುವ ಸಂತೋಷ, ಹೆಣ್ಣು ಮಗು ಹುಟ್ಟಿದಾಗ ಕಾಣಿಸಲಿಲ್ಲ" ಎಂದು ಮಾಡಿದ ಆ ಟ್ವೀಟ್ ಮೆಗಾ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಯಿತು.

ಸಿಡಿದ ಮೆಗಾ ಸೊಸೆ ಲಾವಣ್ಯ ತ್ರಿಪಾಠಿ

ಈ ಟೀಕೆಗಳಿಗೆ ಮೆಗಾ ಕುಟುಂಬದ ಸೊಸೆ, ನಟಿ ಲಾವಣ್ಯ ತ್ರಿಪಾಠಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
"ಇಂತಹ ಪೋಸ್ಟ್ಗಳು ಕೇವಲ ಆಕ್ಷೇಪಾರ್ಹವಾಗಿರುವುದಲ್ಲ, ಒಂದು ಸಂತೋಷದ ಕ್ಷಣವನ್ನು ಅಸಹ್ಯಕರವಾಗಿ ಬದಲಾಯಿಸುವ ಪ್ರಯತ್ನದಂತಿವೆ" ಎಂದು ಲಾವಣ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ಸರಿಯಲ್ಲ

"ಚಿರಂಜೀವಿ ಅವರು ತಮ್ಮ ಕುಟುಂಬದ ಮಹಿಳೆಯರನ್ನು, ವಿಶೇಷವಾಗಿ ಮೊಮ್ಮಕ್ಕಳನ್ನು ಎಷ್ಟು ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳುತ್ತಾರೆ ಎಂಬುದು ಹೊರಗಿನವರಿಗೆ ತಿಳಿದಿಲ್ಲ. ಅವರು ಮಾಡುವ ಕೆಲಸಗಳಲ್ಲಿ ಕನಿಷ್ಠ ಶೇ.1ರಷ್ಟನ್ನಾದರೂ ಮಾಡಲಾಗದವರು ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ಸರಿಯಲ್ಲ. ನಿಜವಾಗಿ ತಿಳಿಯದ ವ್ಯಕ್ತಿಗಳ ಬಗ್ಗೆ ಮಾತನಾಡದೇ ಇರುವುದೇ ಉತ್ತಮ" ಎಂದು ಲಾವಣ್ಯ ಖಡಕ್ ಮಾತುಗಳಲ್ಲಿ ತಿರುಗೇಟು ನೀಡಿದ್ದಾರೆ.

ಲಾವಣ್ಯ ತ್ರಿಪಾಠಿ ಬಗ್ಗೆ

ನಟಿ ಲಾವಣ್ಯ ತ್ರಿಪಾಠಿ 2012ರಲ್ಲಿ ‘ಅಂದಾಲ ರಾಕ್ಷಸಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ತಮಿಳು ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದರು. ಮೆಗಾ ಹೀರೋ ವರುಣ್ ತೇಜ್ (ಚಿರಂಜೀವಿ ಅವರ ತಮ್ಮನ ಪುತ್ರ) ಅವರನ್ನು ಪ್ರೀತಿಸಿ, 2024ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 2025ರಲ್ಲಿ ಗಂಡು ಮಗು ಜನಿಸಿದ್ದು, ಮಗುವಿಗೆ ‘ವಾಯುವ್ ತೇಜ್’ ಎಂದು ನಾಮಕರಣ ಮಾಡಲಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-04 19:10:25
No Reviews