ಬಸ್ ಅಗ್ನಿ ಅವಘಡ ದೊಡ್ಡ ದುರಂತ ತಪ್ಪಿತು

ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ ಟೈರ್ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗಿದೆ.

ಶುಕ್ರವಾರ ತಡರಾತ್ರಿ ಸಂಭವಿಸಿದ ಈ ಘಟನೆಯಲ್ಲಿ ಬಸ್‌ನಲ್ಲಿ ಇದ್ದ 36 ಪ್ರಯಾಣಿಕರನ್ನು ಚಾಲಕ ತಕ್ಷಣ ಸುರಕ್ಷಿತವಾಗಿ ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಭರತ್ ಕಂಪನಿಗೆ ಸೇರಿದ ಈ ಬಸ್‌ನ ಹಿಂಬದಿ ಟೈರ್ ಭಾಗದಲ್ಲಿ ಅಚಾನಕ್ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು.

ಚಾಲಕನ ಸಮಯೋಚಿತ ಜಾಗರೂಕತೆಯಿಂದ ಜೀವಹಾನಿ ತಪ್ಪಿದರೂ, ಪ್ರಯಾಣಿಕರ ಲಗೇಜ್‌ಗಳು ಹಾಗೂ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಆಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿದೆ. ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡದ ನಿಖರ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-16 12:07:42
No Reviews