ಬಸ್‌ಗಳಿಂದ ತಂಬಾಕು ಜಾಹೀರಾತು ತೆರವುಗೊಳಿಸಲು ಸೂಚನೆ

ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪೋಸ್ಟರ್ ಅಂಟಿಸಿರುವುದಕ್ಕೆ ವಿರುದ್ಧವಾಗಿ ರಾಜ್ಯದಾದ್ಯಂತ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಬಸ್‌ಗಳಿಗೆ ಅಂಟಿಸಲಾಗಿದ್ದ ಜಾಹೀರಾತುಗಳನ್ನು ಕಿತ್ತೆಸೆಯುವ ಮೂಲಕ ತಮ್ಮ ಆಕ್ರೋಶ ತೋರಿಸಿದ್ದು, ಇಂಥ ಜಾಹೀರಾತುಗಳಿಗೆ ಕೂಡಲೇ ಕಡಿವಾಣ ಹಾಕಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು.

ಈ ತೀವ್ರ ವಿರೋಧದ ಬೆನ್ನಲ್ಲೇ ಜನಾಭಿಪ್ರಾಯಕ್ಕೆ ಮಣಿದಿರುವ ಸರ್ಕಾರ, ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡುವ ಎಲ್ಲಾ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದೆ. ರಾಜ್ಯದಾದ್ಯಂತ ಸುಮಾರು 2,000 ಸರ್ಕಾರಿ ಬಸ್‌ಗಳ ಮೇಲೆ ಅಂಟಿಸಲಾಗಿದ್ದ ತಂಬಾಕು ಜಾಹೀರಾತುಗಳನ್ನು 15 ದಿನಗಳ ಒಳಗೆ ಸಂಪೂರ್ಣವಾಗಿ ತೆರವುಗೊಳಿಸುವಂತೆ ಆದೇಶಿಸಲಾಗಿದೆ.

ಈ ಸಂಬಂಧ ಜಾಹೀರಾತು ನೀಡಿದ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವುಗಳೂ ಜಾಹೀರಾತು ತೆರವುಗೊಳಿಸಲು ಒಪ್ಪಿಗೆ ಸೂಚಿಸಿವೆ. ಆಯಾ ಡಿಪೋಗಳ ಡಿಪೋ ಮ್ಯಾನೇಜರ್‌ಗಳಿಗೂ ತಕ್ಷಣವೇ ಜಾಹೀರಾತುಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ಜಾಹೀರಾತು ಪೋಸ್ಟರ್‌ಗಳನ್ನು ಕಿತ್ತೆಸೆಯುವ ಘಟನೆಗಳು ಹೆಚ್ಚಾಗುತ್ತಿದ್ದಂತೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಎಲ್ಲಾ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ತೆರವುಗೊಳಿಸಲು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ವಾರ್ಷಿಕವಾಗಿ ಸುಮಾರು 60 ಕೋಟಿ ರೂಪಾಯಿ ಆದಾಯ ಬರುತ್ತಿದ್ದರೂ, ಸಮಾಜದ ಸ್ವಾಸ್ಥ್ಯ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-07 10:42:44
No Reviews