ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆಯಾ?

ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠವು, ಬೈಕ್ ಟ್ಯಾಕ್ಸಿ ಮೇಲಿನ ನಿಷೇಧವನ್ನು ಅಸಾಂವಿಧಾನಿಕ ಹಾಗೂ ಮೋಟಾರು ವಾಹನಗಳ ಕಾಯಿದೆಗೆ ವಿರುದ್ಧವೆಂದು ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ, ಮೂರು ತಿಂಗಳ ನಂತರ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಓಲಾ, ಉಬರ್, ರ್ಯಾಪಿಡೊ ಸೇರಿದಂತೆ ಅಗ್ರಿಗೇಟರ್ ಸಂಸ್ಥೆಗಳ ಮೇಲ್ಮನವಿಗಳನ್ನು ಪುರಸ್ಕರಿಸಿದ್ದ ಹೈಕೋರ್ಟ್, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನವಾಗಿ ನೋಂದಣಿ ಮಾಡಲು ಹಾಗೂ ಕಾಂಟ್ರಾಕ್ಟ್ ಕ್ಯಾರಿಯೇಜ್ ಆಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಮೋಟಾರು ವಾಹನಗಳ ಕಾಯಿದೆ 1988 ಅಡಿಯಲ್ಲಿ ಮಾರ್ಗಸೂಚಿ ರೂಪಿಸದೆ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ನಿರ್ಬಂಧ ಹೇರುವುದು ಅತಾರ್ಕಿಕ ನಿಯಂತ್ರಣವೆಂದು ಹಾಗೂ ಅದು ಸಂವಿಧಾನದ 19(1)(g) ವಿಧಿಯಡಿ ವ್ಯವಹಾರ ನಡೆಸುವ ಹಕ್ಕಿಗೆ ವಿರುದ್ಧವೆಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪಿಗೆ ವಿರೋಧವಾಗಿ ರಾಜ್ಯ ಸರ್ಕಾರದ ಮೇಲ್ಮನವಿ ಇದೀಗ ಸುಪ್ರೀಂ ಕೋರ್ಟ್ ಪರಿಶೀಲನೆಗೆ ಕಾಯುತ್ತಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-29 18:23:07
No Reviews