ಬಿಡದಿ ಟೌನ್‌ಶಿಪ್‌ಗೆ ಹೈಕೋರ್ಟ್ ಬ್ರೇಕ್; ಭೂಸ್ವಾಧೀನಕ್ಕೆ ತಾತ್ಕಾಲಿಕ ತಡೆ!

ಬಿಡದಿ ಟೌನ್‌ಶಿಪ್‌ಗೆ ಹೈಕೋರ್ಟ್ ಬ್ರೇಕ್; ಭೂಸ್ವಾಧೀನಕ್ಕೆ ಮಧ್ಯಂತರ ತಡೆ, ರೈತರಿಗೆ ತಾತ್ಕಾಲಿಕ ನೆಮ್ಮದಿ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್' ಯೋಜನೆಗೆ ಸದ್ಯ ಕಾನೂನು ತಡೆ ಎದುರಾಗಿದೆ. ಬಿಡದಿ ಸಮೀಪದ ಸುಮಾರು 516 ಎಕರೆ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಪರಿಹಾರ ನಿಗದಿಯಾಗುವವರೆಗೆ ಅರ್ಜಿದಾರ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿದೆ.

ಹೊಸೂರು ಗ್ರಾಮದ 14 ರೈತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೂರು ವಾರಗಳ ಬಳಿಕಕ್ಕೆ ಮುಂದೂಡಲಾಗಿದೆ.

ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಮಂಡಲಹಳ್ಳಿ, ವಡೇರಹಳ್ಳಿ ಹಾಗೂ ಕೆಂಪಯ್ಯನಪಾಳ್ಯ ಗ್ರಾಮಗಳ ಭೂಸ್ವಾಧೀನಕ್ಕೆ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮ ಒಪ್ಪಿಗೆಯಿಲ್ಲದೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದರು.

ರೈತರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಎಚ್. ಪ್ರಕಾಶ್, 2013ರ ಭೂಸ್ವಾಧೀನ ಕಾಯ್ದೆಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದೆ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಜೊತೆಗೆ, ಯೋಜನೆಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಿದ್ದರೂ, ರೈತರ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂದು ವಾದಿಸಿದರು.

ವಿಚಾರಣೆ ವೇಳೆ, 2013ರ ಭೂಸ್ವಾಧೀನ ಕಾಯ್ದೆಯ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಲಾಗಿದೆಯೇ ಹಾಗೂ ಸೆಕ್ಷನ್ 10ಎ ಅಡಿಯಲ್ಲಿ ನೀಡಿರುವ ವಿನಾಯಿತಿಗೆ ಈ ಯೋಜನೆ ಅರ್ಹವೇ ಎಂಬ ಕುರಿತು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿತು.

ಇದಕ್ಕೆ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಉತ್ತರಿಸಿ, ಹೆಚ್ಚಿನ ರೈತರು ಭೂಸ್ವಾಧೀನಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. ಕಾನೂನಿನಡಿ ಅಗತ್ಯ ವಿನಾಯಿತಿ ನೀಡಲಾಗಿದ್ದು, ಪರಿಹಾರ ನಿಗದಿಯಾಗುವವರೆಗೆ ಅರ್ಜಿದಾರರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಸರ್ಕಾರದ ಈ ಭರವಸೆಯನ್ನು ದಾಖಲಿಸಿಕೊಂಡ ಹೈಕೋರ್ಟ್, ಪರಿಹಾರ ನಿಗದಿಯಾಗುವವರೆಗೆ ಅರ್ಜಿ ಸಲ್ಲಿಸಿರುವ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದಂತೆ ಮಧ್ಯಂತರ ತಡೆ ನೀಡಿತು.

ಹೈಕೋರ್ಟ್ ಆದೇಶದ ಬಳಿಕ ಭೂಸ್ವಾಧೀನವನ್ನು ವಿರೋಧಿಸುತ್ತಿದ್ದ ರೈತರಲ್ಲಿ ತಾತ್ಕಾಲಿಕ ನೆಮ್ಮದಿ ಮೂಡಿದ್ದು, ಪ್ರಕರಣದ ಮುಂದಿನ ವಿಚಾರಣೆಯತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-08-04 17:42:10
No Reviews