ಬೆಂಗಳೂರು ವಿವಿ ರಸ್ತೆ ತಾತ್ಕಾಲಿಕ ಬಂದ್ ಪರ್ಯಾಯ ಮಾರ್ಗ ಪ್ರಕಟ

ನಗರದ ಹೃದಯ ಭಾಗವಾದ M. G. Road ನಲ್ಲಿ ಮರು ಡಾಂಬರೀಕರಣ ಕಾಮಗಾರಿ ಆರಂಭವಾಗಲಿದ್ದು, ಸುಮಾರು 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಟ್ರಿನಿಟಿ ಸರ್ಕಲ್‌ನಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವೃತ್ತದವರೆಗೆ ಸುಮಾರು 2.2 ಕಿಮೀ ಉದ್ದದ ರಸ್ತೆಗೆ ಮರು ಡಾಂಬರೀಕರಣ ನಡೆಯಲಿದೆ.

ಮಾರ್ಚ್ 4ರ ಸಂಜೆ ಪೂರ್ವಸಿದ್ಧತಾ ಕಾಮಗಾರಿಗಳು ಆರಂಭವಾಗಲಿವೆ. ಟ್ರಾಫಿಕ್ ಪೊಲೀಸ್ ಅನುಮತಿ ಬಾಕಿ ಇರುವುದರಿಂದ ಸ್ವಲ್ಪ ವಿಳಂಬ ಸಾಧ್ಯತೆ ಇದ್ದರೂ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಾದ 25 ಕೋಟಿ ರೂಪಾಯಿ ಅನುದಾನದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಎಂ.ಜಿ. ರಸ್ತೆ ಸೇರಿದಂತೆ ಏಳು ಪ್ರಮುಖ ರಸ್ತೆಗಳಿಗೆ ಮರು ಡಾಂಬರೀಕರಣ ಯೋಜಿಸಲಾಗಿದೆ.

ಇನ್ನೊಂದೆಡೆ, ರೈಲ್ವೆ ಸೇತುವೆಯ ಸ್ಟೀಲ್ ಗರ್ಡರ್ ಬದಲಾವಣೆ ಕಾಮಗಾರಿಯ ಹಿನ್ನೆಲೆ ಮೈಸೂರು ರಸ್ತೆಯಿಂದ ಜ್ಞಾನಭಾರತಿ ಕ್ಯಾಂಪಸ್ ಕಡೆಗೆ ಸಾಗುವ Bangalore University ರಸ್ತೆ ಬುಧವಾರ ಸಂಜೆ 6ರಿಂದ ಶುಕ್ರವಾರ ಮಧ್ಯಾಹ್ನ 12ರವರೆಗೆ ತಾತ್ಕಾಲಿಕವಾಗಿ ಬಂದ್ ಆಗಲಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗಗಳು

  • ಮೈಸೂರು ರಸ್ತೆಯಿಂದ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಉಳ್ಳಾಲ ರಿಂಗ್ ರೋಡ್ ಕಡೆಗೆ ಸಾಗುವ ವಾಹನಗಳು ಜ್ಞಾನಭಾರತಿ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ಜೈರಾಮದಾಸ್ ಜಂಕ್ಷನ್, ಮುತ್ತುರಾಯನಗರ–ಗವರ್‍ನ್ಮೆಂಟ್ ಪ್ರೆಸ್ ರಸ್ತೆ ಮೂಲಕ ಬಿಪಿಇಡ್ ಮೈದಾನದ ಬಳಿ ಬಲಕ್ಕೆ ತಿರುಗಿ ವಿಶ್ವವಿದ್ಯಾಲಯ ರಸ್ತೆಗೆ ತೆರಳಬೇಕು.

  • ಉಳ್ಳಾಲ ಜಂಕ್ಷನ್‌ನಿಂದ ಜ್ಞಾನಭಾರತಿ ಜಂಕ್ಷನ್ ಹಾಗೂ ಮೈಸೂರು ರಸ್ತೆ ಕಡೆಗೆ ಸಾಗುವವರು ವಿಶ್ವವಿದ್ಯಾಲಯ ಮುಖ್ಯ ಕಚೇರಿ ವೃತ್ತದ ಬಳಿ ಎಡಕ್ಕೆ ತಿರುಗಿ ನಾಗರಭಾವಿ ಮುಖ್ಯ ರಸ್ತೆ–ರಿಂಗ್ ರೋಡ್ ಮೂಲಕ ಮೈಸೂರು ರಸ್ತೆಗೆ ಸಾಗಬೇಕು.

  • ಮರಿಯಪ್ಪನಪಾಳ್ಯ ಜಂಕ್ಷನ್‌ನಿಂದ ಮೈಸೂರು ರಸ್ತೆ ಕಡೆಗೆ ಹೋಗುವವರು ವಿಶ್ವವಿದ್ಯಾಲಯ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುಗಿ, ಮುಖ್ಯ ಕಚೇರಿ ವೃತ್ತದ ಬಳಿ ಬಲಕ್ಕೆ ತಿರುಗಿ ನಾಗರಭಾವಿ ಮುಖ್ಯ ರಸ್ತೆ ಮೂಲಕ ರಿಂಗ್ ರೋಡ್ ಸೇರಬೇಕು.

ಸಂಚಾರ ದಟ್ಟಣೆ ತಪ್ಪಿಸಲು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-04 18:55:03
No Reviews