ಸ್ಮಾರ್ಟ್ ಏರ್‌ಪೋರ್ಟ್ ಆಗಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ದೇಶ–ವಿದೇಶಗಳಲ್ಲಿ ವಿಮಾನ ಅಪಘಾತಗಳ ಆತಂಕ ಹೆಚ್ಚುತ್ತಿರುವ ನಡುವೆಯೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪ್ರಯಾಣಿಕರು ಮತ್ತು ವಿಮಾನಗಳ ಸುರಕ್ಷತೆಗೆ ಮಹತ್ವದ ಹೆಜ್ಜೆ ಇಟ್ಟಿದೆ. ಬಿಐಎಎಲ್ ‘ಸ್ಮಾರ್ಟ್ ಏರ್‌ಸೈಡ್ ಸೇಫ್ಟಿ ಸಿಸ್ಟಂ’ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಜಾರಿಗೆ ತಂದಿದೆ.

ವಿಮಾನಗಳು ಹಾಗೂ ವಾಹನಗಳು ಸಂಚರಿಸುವ ಏರ್‌ಸೈಡ್ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ. ಹಿಂದೆ ಸಿಬ್ಬಂದಿಯೇ ಕೈಯಾರೆ ಲೈಟ್‌ಗಳನ್ನು ನಿಯಂತ್ರಿಸುವ ವ್ಯವಸ್ಥೆ ಇದ್ದು, ಕೆಲವೊಮ್ಮೆ ದೋಷಗಳಿಂದ ವಿಮಾನ ಹಾರಾಟಕ್ಕೂ ವಿಳಂಬವಾಗುತ್ತಿತ್ತು. ಈಗ ಆ ಸಮಸ್ಯೆಗಳಿಗೆ ಪೂರ್ಣವಿರಾಮ ಬಂದಿದೆ.

ಈ ಹೊಸ ವ್ಯವಸ್ಥೆಯಲ್ಲಿ ಎಐ ಚಾಲಿತ ಸ್ಮಾರ್ಟ್ ಕ್ಯಾಮೆರಾಗಳು ಅಳವಡಿಸಲ್ಪಟ್ಟಿದ್ದು, ಏರ್‌ಸೈಡ್‌ನಲ್ಲಿ ಚಲಿಸುವ ಪ್ರತಿಯೊಂದು ವಾಹನವನ್ನು ನಿಗಾ ಇಡುತ್ತದೆ. ನಿಯಮ ಉಲ್ಲಂಘನೆ ಅಥವಾ ಅಪಾಯದ ಸಾಧ್ಯತೆ ಕಂಡುಬಂದರೆ ಕ್ಷಣಾರ್ಧದಲ್ಲಿ ಎಚ್ಚರಿಕೆ ನೀಡುತ್ತದೆ ಹಾಗೂ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನಿಸುತ್ತದೆ. ಎಲ್ಲಾ ಡೇಟಾ ಡಿಜಿಟಲ್ ರೂಪದಲ್ಲಿ ದಾಖಲಾಗುವುದರಿಂದ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆ ಹೆಚ್ಚಲಿದೆ.

ಕಡಿಮೆ ಗೋಚರತೆ ಇರುವ ರಾತ್ರಿ ಅಥವಾ ಮಂಜಿನ ಪರಿಸ್ಥಿತಿಯಲ್ಲಿಯೂ ಈ ತಂತ್ರಜ್ಞಾನ ವಿಮಾನ ಮತ್ತು ವಾಹನಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತದೆ. ಇದರಿಂದ ಅಪಘಾತದ ಸಾಧ್ಯತೆ ಕಡಿಮೆಯಾಗಿದ್ದು, ವಿಮಾನಗಳ ಸಮಯಪಾಲನೆಗೂ ಸಹಕಾರಿಯಾಗಲಿದೆ.

2024–25ರಲ್ಲಿ ಬಿಐಎಎಲ್ 4.18 ಕೋಟಿ ಪ್ರಯಾಣಿಕರಿಗೆ ಸೇವೆ ನೀಡಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ ಪಡೆದಿದೆ. ಒಟ್ಟು 35 ಕೋಟಿಗೂ ಹೆಚ್ಚು ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದಾರೆ. ಜಾಗತಿಕ ಮಟ್ಟದ ‘ACI 5-ಸ್ಟಾರ್ ಏರ್‌ಪೋರ್ಟ್ ರೇಟಿಂಗ್’ ಪಡೆದಿರುವ ಕೆಐಎ, ಹಣ್ಣು–ತರಕಾರಿ ಸಾಗಣೆಯಲ್ಲಿ ಸತತ ನಾಲ್ಕನೇ ವರ್ಷವೂ ಭಾರತದ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ.

ಹೊಸ ಸ್ಮಾರ್ಟ್ ಸುರಕ್ಷತಾ ವ್ಯವಸ್ಥೆಯಿಂದ ಬೆಂಗಳೂರು ವಿಮಾನ ನಿಲ್ದಾಣವು ಮತ್ತಷ್ಟು ಆಧುನಿಕ, ಸುರಕ್ಷಿತ ಮತ್ತು ಕಾರ್ಯಕ್ಷಮತೆಯಲ್ಲಿ ಮುಂಚೂಣಿಯಲ್ಲಿರುವ ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ.

 

 

 

 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-05 16:27:40
No Reviews