ಬೆಂಗಳೂರಿನ ಈ ರಸ್ತೆಗಳಲ್ಲಿ ಪ್ರಯಾಣಕ್ಕೆ ಮುನ್ನ ಪೊಲೀಸರ ಮಾಹಿತಿ ಗಮನಿಸಿ

ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿಗೆ ಕಳೆದ ರಾತ್ರಿ ವರುಣ ತಂಪು ನೀಡಿದ್ದಾನೆ. ಆದರೆ ಭಾರೀ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಿಂದ ನಗರದಾದ್ಯಂತ ಅನಾಹುತಗಳು ಸಂಭವಿಸಿದ್ದು, ಪ್ರತ್ಯೇಕ ಘಟನೆಗಳಲ್ಲಿ 10 ಮಂದಿ ಬಲಿಯಾಗಿದ್ದಾರೆ.

ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ಅಂಡರ್‌ಪಾಸ್‌ಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಲೌರಿ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದರಿಂದ ಮಹದೇವಪುರ ಮಾರ್ಗದಲ್ಲಿ ನಿಧಾನಗತಿಯ ಸಂಚಾರ ಕಂಡುಬಂದಿದೆ. ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಮುಳುಗಿ, ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.

ಭಾಷ್ಯಂ ವೃತ್ತ, ಬಸವನಗುಡಿ ಸೇರಿದಂತೆ ಹಲವು ಕಡೆ ಬೃಹತ್ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಿದ್ಯಾಪೀಠ ಸರ್ಕಲ್–ಬಸವನಗುಡಿ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದೆ. ಬೊಮ್ಮನಹಳ್ಳಿ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ರೂಪೇನ ಅಗ್ರಹಾರ ಕಡೆಗೂ ಸಂಚಾರ ನಿಧಾನವಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಶಿವಾನಂದ ಸರ್ಕಲ್, ಕ್ರೆಸೆಂಟ್ ರಸ್ತೆ, ಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರ ಬಿದ್ದು ಕಾರು, ಬೈಕ್‌ಗಳು ಜಖಂಗೊಂಡಿವೆ. ಮೆಜೆಸ್ಟಿಕ್ ಕಾರ್ ಪಾರ್ಕಿಂಗ್ ಸ್ಥಳದಲ್ಲೂ ಮರ ಬಿದ್ದು ಮೂರು ಕಾರುಗಳಿಗೆ ಹಾನಿಯಾಗಿದೆ. ಕ್ಷಿಪ್ರ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-30 12:34:07
No Reviews