ಬಳ್ಳಾರಿ ಬೆಂಕಿ ಪ್ರಕರಣಕ್ಕೆ ಶಾಕ್ ಟ್ವಿಸ್ಟ್: 8 ಮಂದಿ ಪೊಲೀಸ್ ವಶಕ್ಕೆ

ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಸೇರಿದ ಜಿ ಸ್ಕೈರ್ ಲೇಔಟ್‌ನ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ, ಸೈಟ್ ಎಂಜಿನಿಯರ್ ರಿಜ್ವಾನ್ ನೀಡಿದ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ 8–10 ಮಂದಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಮನೆಯೊಳಗಿನ ಸುಮಾರು ₹1.25 ಕೋಟಿ ಮೌಲ್ಯದ ಪರಿಕರಗಳು ನಾಶವಾಗಿವೆ ಎಂದು ಉಲ್ಲೇಖಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಮಾಹಿತಿ ನೀಡಿದ್ದು, ಅಪರಿಚಿತರು ಬೆಂಕಿ ಹಚ್ಚಿದ ಕುರಿತು ದೂರು ದಾಖಲಾಗಿದ್ದು, ಎಫ್‌ಎಸ್‌ಎಲ್ ತಂಡದಿಂದ ಸ್ಥಳ ಪರಿಶೀಲನೆ ನಡೆಯಲಿದೆ. ಈ ಮನೆಗೆ ಯಾರೂ ವಾಸವಿಲ್ಲ; ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ ಆರು ಮಂದಿ ಅಪ್ರಾಪ್ತರು ಮತ್ತು ಇಬ್ಬರು ವಯಸ್ಕರು. ರೀಲ್ಸ್ ಹಾಗೂ ಫೋಟೋಶೂಟ್‌ಗೆ ಬಂದಿದ್ದ ವೇಳೆ, ಮೊದಲ ಮಹಡಿಯಲ್ಲಿ ಸಿಗರೇಟ್‌ನಿಂದ ಬೆಂಕಿ ತಗುಲಿರುವ ಶಂಕೆ ಇದೆ. ಆರೋಪಿತರಲ್ಲಿ ಇಬ್ಬರು ಮುಂಬೈ ಮೂಲದವರು; ಯಾರಿಗೂ ರಾಜಕೀಯ ಹಿನ್ನೆಲೆ ಇಲ್ಲ ಎಂದು ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, ಇತ್ತೀಚೆಗೆ ತಮಗೆ ಬೆದರಿಕೆ ಬಂದಿದ್ದುದನ್ನು ಉಲ್ಲೇಖಿಸಿ, 150 ಎಕರೆ ಲೇಔಟ್‌ನಲ್ಲಿನ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ ಎಂದು ಹೇಳಿದರು. ಈ ಕುರಿತು ಎಸ್‌ಪಿಯ ಗಮನಕ್ಕೆ ತಂದಿದ್ದು, ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-24 11:47:12
No Reviews