ಅಮೆರಿಕದ ಸುಂಕ ಎಷ್ಟು? ಯುಎಸ್ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಭಾರತಕ್ಕೆ ಎಷ್ಟು ಭಾರ?

ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿರುವ ನಡುವೆ, ಅಮೆರಿಕವು ಈ ತಿಂಗಳ ಆರಂಭದಲ್ಲಿ ಭಾರತೀಯ ಸರಕುಗಳ ಮೇಲೆ ಶೇ.18 ಸುಂಕ ಘೋಷಿಸಿತ್ತು. ಆದರೆ ಯುಎಸ್ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಆ ಸುಂಕ ರದ್ದಾಗಿದ್ದು, ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸ ಶೇ.10 ಸುಂಕ ವಿಧಿಸುವ ಕ್ರಮಕ್ಕೆ ಮುಂದಾದರು.

1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ಅನ್ನು ಅನ್ವಯಿಸಿ ಫೆಬ್ರವರಿ 24ರಿಂದ ಶೇ.10 ತಾತ್ಕಾಲಿಕ ಸುಂಕ ಜಾರಿಯಾಗಲಿದೆ. ಶ್ವೇತಭವನ ಮೂಲಗಳ ಪ್ರಕಾರ ಭಾರತಕ್ಕೂ ತಾತ್ಕಾಲಿಕವಾಗಿ ಶೇ.10 ಸುಂಕ ಅನ್ವಯಿಸುವ ಸಾಧ್ಯತೆ ಇದೆ.

ಆದರೆ ತಜ್ಞರ ಅಂದಾಜು ಪ್ರಕಾರ, ಈಗಿರುವ ಶೇ.3.5 ಮೂಲ ಸುಂಕಕ್ಕೆ ಹೊಸ ಶೇ.10 ಸೇರಿ ಒಟ್ಟು ಭಾರ ಶೇ.13.5 ಆಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅಂತಿಮ ಸ್ಪಷ್ಟನೆಗಾಗಿ ಭಾರತೀಯ ಸರ್ಕಾರದ ನಿಯೋಗ ಮುಂದಿನ ವಾರ ವಾಷಿಂಗ್ಟನ್ ಡಿಸಿ ಭೇಟಿ ನೀಡಲಿದೆ.

ಇದಕ್ಕೂ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಯುಎಸ್ ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದ್ದು, ಬಳಿಕ ವಾಣಿಜ್ಯ ಅಥವಾ ವಿದೇಶಾಂಗ ಸಚಿವಾಲಯ ಅಧಿಕೃತ ಪ್ರತಿಕ್ರಿಯೆ ನೀಡಲಿದೆ ಎಂದು ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-21 19:08:15
No Reviews