ರಜತ್‌ಗೆ ಮತ್ತೆ ಸಂಕಷ್ಟ: ನಟನ ವಿರುದ್ಧ ಕೇಸ್ ದಾಖಲು

ಕೆಲ ದಿನಗಳ ಹಿಂದೆ ನಟ ರಜತ್ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ರೀಲ್ಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಬೈಕ್ ಮೇಲೆ ಸ್ಟೈಲ್ ಆಗಿ ಬರುವ ದೃಶ್ಯದ ಹಿಂದೆ ಪೆಟ್ರೋಲ್ ಬಾಂಬ್ ಬ್ಲಾಸ್ಟ್ ದೃಶ್ಯ ಸೇರಿಸಲಾಗಿದ್ದು, ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ವಿರೋಧ ಹೆಚ್ಚುತ್ತಿದ್ದಂತೆ ರಜತ್ ಆ ರೀಲ್ಸ್ ಅನ್ನು ಡಿಲೀಟ್ ಮಾಡಿ, ಕ್ಷಮೆಯಾಚನೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ತಮ್ಮಿಂದ ನಡೆದ ಬ್ಲಾಸ್ಟ್ ಸುರಕ್ಷತಾ ಕ್ರಮಗಳೊಂದಿಗೆ ಹಾಗೂ ಸ್ಥಳೀಯರ ಅನುಮತಿ ಪಡೆದೇ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಆದರೆ ಕನಕಪುರ ರಸ್ತೆಯ ವಡೇರಹಳ್ಳಿ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ರೀಲ್ಸ್ ಶೂಟ್ ಮಾಡಿರುವ ಹಿನ್ನೆಲೆಯಲ್ಲಿ ಕಗ್ಗಲಿಪುರ ಪೊಲೀಸರು ರಜತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ, ರಸ್ತೆ ನಿಯಮ ಉಲ್ಲಂಘನೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪಗಳು ದಾಖಲಾಗಿದೆ.

ಈ ಹಿಂದೆ ಕೂಡ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ರಜತ್ ಜೈಲು ಸೇರಿದ್ದರೆ, ಮೈಸೂರಿನಲ್ಲಿ ಫೋಟೋಶೂಟ್ ಮಾಡಿದ್ದ ಕಾರಣಕ್ಕೂ ಅವರು ವಿವಾದಕ್ಕೆ ಸಿಲುಕಿದ್ದರು. ಇದೀಗ ಮತ್ತೆ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ.

ಪೊಲೀಸರು ರಜತ್‌ಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಅವರ ರೀಲ್ಸ್‌ನಲ್ಲಿ “ಸುರಕ್ಷತಾ ಕ್ರಮ ಪಾಲಿಸಿ, ಹೆಲ್ಮೆಟ್ ಧರಿಸಿ” ಎಂಬ ಡಿಸ್ಕ್ಲೈಮರ್ ಕೂಡ ಹಾಕಲಾಗಿತ್ತು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-30 13:18:03
No Reviews